ಬಾಗಲಕೋಟೆ ಜಿಲ್ಲೆಯ ರಬಕವಿ ನಗರದ ಜನತೆ ಈಗ ಕಳ್ಳರ ಗ್ಯಾಂಗ್ ಕಂಡು ಬೆಚ್ಚಿ ಬಿದ್ದಿದ್ದಾರೆ. ಹಿಂದೆ ಚಡ್ಡಿ ಕಳ್ಳರ ಕಾಟ ಅನುಭವಿಸಿದ್ದ ಜಿಲ್ಲೆಯಲ್ಲಿ ಈಗ ಮತ್ತೊಂದು ಮಾರಕಾಸ್ತ್ರಧಾರಿ ಕಳ್ಳರ ಗ್ಯಾಂಗ್ ಪ್ರತ್ಯಕ್ಷವಾಗಿದೆ.

ರಬಕವಿ ಬನಹಟ್ಟಿ ತಾಲೂಕಿನ ಬಸವನಗರದಲ್ಲಿ ಮಧ್ಯರಾತ್ರಿ ಸುಮಾರು 2.52ರ ಸುಮಾರಿಗೆ ಆರು ಜನರ ಕಳ್ಳರ ತಂಡ ಪ್ರತ್ಯಕ್ಷವಾಗಿದೆ. ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್ ಧರಿಸಿದ್ದು, ಕೈಯಲ್ಲಿ ಕಬ್ಬಿಣದ ರಾಡ್ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡಿದ್ದಾರೆ. ಈ ಗ್ಯಾಂಗ್ ಹಲವು ಮನೆಗಳ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡಿ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.ಈ ಕಳ್ಳರ ಗ್ಯಾಂಗ್ ಬಸವನಗರದ ಕೆಲವು ಮನೆಗಳ ಬೀಗ ಮುರಿಯಲು ಯತ್ನಿಸಿದೆಯಾದರೂ, ಸ್ಥಳೀಯರ ಎಚ್ಚರಿಕೆ ಅಥವಾ ಇನ್ಯಾವುದೋ ಕಾರಣದಿಂದ ಏನನ್ನೂ ಕದಿಯಲಾಗದೆ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ. ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
