Accident

ಲೊಂಢಾ ರೈಲ್ವೆ ಫಾಟಾ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

Share

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲೊಂಢಾ ರೈಲ್ವೆ ಫಾಟಾ ಬಳಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗವಳಿವಾಡದ ನಿವಾಸಿ ನಾವು ಬಾಬು ಖರಾತ್ (23) ಮೃತ ದುರ್ದೈವಿ. ರಸ್ತೆ ಕಾಮಗಾರಿಗಾಗಿ ಇರಿಸಲಾಗಿದ್ದ ಸಿಮೆಂಟ್ ಬ್ಯಾರಿಕೇಡ್‌ಗೆ ದ್ವಿಚಕ್ರ ವಾಹನವು ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿಯಲ್ಲಿನ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎಂಬ ಆರೋಪ ಕೇಳಿಬಂದಿದೆ. ಮೃತ ನಾವು ಖರಾತ್ ಶುಕ್ರವಾರ ರಾತ್ರಿ ತನ್ನ ಅತ್ತೆಯ ಮನೆಗೆ ಹೋಗಿ ಮರಳುತ್ತಿದ್ದಾಗ, ಸುಮಾರು 8:30ರ ವೇಳೆಗೆ ಲೊಂಢಾ ರೈಲ್ವೆ ಗೇಟ್ ಬಳಿ ಈ ಅವಘಡ ಸಂಭವಿಸಿದೆ. ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸಿಮೆಂಟ್ ಬ್ಯಾರಿಕೇಡ್‌ಗಳಿಗೆ ಅಪ್ಪಳಿಸಿದ ವೇಗಕ್ಕೆ ಆತ ಎರಡು ಬ್ಯಾರಿಕೇಡ್‌ಗಳ ಮಧ್ಯೆ ಸಿಲುಕಿಕೊಂಡಿದ್ದನು. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಲೊಂಢಾ ಪೊಲೀಸ್ ಚೌಕಿಯ ವಿವೇಕ್ ವಡೆ, ಎಫ್. ಮುಲ್ಲಾ ಮತ್ತು ಪ್ರವೀಣ್ ಕರಂಬಳಕರ್ ಅವರು ಸ್ಥಳಕ್ಕೆ ಧಾವಿಸಿ ಪಂಚನಾಮೆ ನಡೆಸಿದರು. ಖಾನಾಪುರ ಪೊಲೀಸ್ ನಿರೀಕ್ಷಕ ಲಾಡ್‌ಸಾಬ್ ಗೌಂಡಿ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತ ಯುವಕ ತಂದೆ, ತಾಯಿ, ತಮ್ಮ ಹಾಗೂ ತಂಗಿಯನ್ನು ಅಗಲಿದ್ದಾನೆ.

Tags:

error: Content is protected !!