ರಾಜ್ಯ ರಾಜಕಾರಣದಲ್ಲಿ ಈಗ ಸವಾಲು-ಪ್ರತಿಸವಾಲುಗಳ ಅಖಾಡ ರಂಗೇರಿದೆ! ಒಂದೆಡೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಹೋರಾಟಕ್ಕೆ ದಿನಾಂಕ ಫಿಕ್ಸ್ ಮಾಡಿದ್ದರೆ, ಮತ್ತೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇರ ಸವಾಲೊಂದನ್ನು ಎಸೆದಿದ್ದಾರೆ. ಶಿಕಾರಿಪುರದಲ್ಲಿ ಪಾದಯಾತ್ರೆ ಮಾಡೋದಲ್ಲ, ತಾಕತ್ತಿದ್ದರೆ ಅಲ್ಲಿಂದಲೇ ಸ್ಪರ್ಧಿಸಿ ಎಂದಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಜನವರಿ 17 ರಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಅರಾಜಕತೆ, ರೈತರ ಸಮಸ್ಯೆಗಳಿಗೆ ಸ್ಪಂದಿಸದ ನೀತಿಯ ವಿರುದ್ಧ ರಾಜ್ಯಮಟ್ಟದ ಹೋರಾಟವನ್ನು ಬಿಜೆಪಿ ನಡೆಸಲಿದೆ ಎಂದರು. ಇನ್ನು ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಶಿಕಾರಿಪುರಕ್ಕೆ ಹೋಗಿ ಪಾದಯಾತ್ರೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಪಾದಯಾತ್ರೆ ಬೇಡ. ಡಿ.ಕೆ.ಶಿವಕುಮಾರ್ ಅವರೇ ಶಿಕಾರಿಪುರದಿಂದ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.
ಇನ್ನು ಮನರೇಗಾವನ್ನು ವಿಕಸಿತ ಭಾರತದ ಮೂಲಕ ಗಾಂಧಿಜೀ ಕನಸು ನನಸಾಗಿಸಲಿ ಪಿಎಂ ಮೋದಿ ಅವರು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕಾಂಗ್ರೆಸ್ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಆ ಹಿನ್ನೆಲೆ ಹೆಸರು ಬದಲಾವಣೆ ಮಾಡಿ 2ನೇ ಬಾರಿ ಗಾಂಧಿಜೀ ಅವರನ್ನು ಕೊಲೆ ಮಾಡಿದ್ದೇವೆ ಎಂದು ಹೇಳಿ ಅಪಪ್ರಚಾರ ಮಾಡಲೂ ಹೊರಟಿದ್ದಾರೆ. ಇದರ ವಿರುದ್ಧ ಜಾಗೃತಿ ನಿರ್ಮಾಣ ಮಾಡುತ್ತೇವೆ ಎಂದರು.
ಇನ್ನು ಜರ್ಮನಿಯ ಚಾನ್ಸಲರ್ ಕರ್ನಾಟಕಕ್ಕೆ ಬಂದಾಗ ಸಿಎಂ ಕುರ್ಚಿ ಉಳಿಸಿಕೊಳ್ಳಲು ಒಬ್ಬರು ಸಿಎಂ ಕುರ್ಚಿ ಕಸಿದುಕೊಳ್ಳಲು ಇಬ್ಬರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಹೋಗಿ ನಿಂತುಕೊಂಡರೇ ರಾಜ್ಯದ ಪರಿಸ್ಥಿತಿ ಏನಾಗಬಾರದು? ಬರುವಂತಹ ದಿನಗಳಲ್ಲಿ ಜನರು ಇದಕ್ಕೆ ತಕ್ಕ ಉತ್ತರ ಕೊಡಲಿದ್ದಾರೆ ಎಂದರು.
