ರಾಜ್ಯ ರಾಜಧಾನಿಯಲ್ಲಿ ಉದ್ಯಮಿ ಸಿಜೆ ರಾಯ್ ಅವರ ನಿಗೂಢ ಸಾವು ಸಂಚಲನ ಮೂಡಿಸಿದೆ. ಐಟಿ ಅಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ, ಗೃಹ ಸಚಿವ ಜಿ. ಪರಮೇಶ್ವರ್ ಅವರು ಪ್ರಕರಣದ ಪ್ರಾಥಮಿಕ ತನಿಖೆಗೆ ಆದೇಶಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ವರು ಕಳೆದ ಡಿಸೆಂಬರ್ನಲ್ಲಿ ಸಿಜೆ ರಾಯ್ ಅವರ ಕಂಪನಿಗಳ ಮೇಲೆ ಐಟಿ ದಾಳಿ ನಡೆದಿತ್ತು. ನಿಯಮದಂತೆ 60 ದಿನಗಳೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕಿದ್ದ ಕಾರಣ ಫೆಬ್ರವರಿ 4ರ ಗಡುವು ಇತ್ತು. ಇದೇ ವಿಚಾರವಾಗಿ ಅಧಿಕಾರಿಗಳು ರಾಯ್ ಅವರನ್ನು ವಿಚಾರಣೆಗೆ ಕರೆದಿದ್ದರು. ಮೂರು ದಿನಗಳ ಹಿಂದಷ್ಟೇ ದುಬೈಯಿಂದ ಮರಳಿದ್ದ ಅವರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಲೇ ‘ಐದು ನಿಮಿಷದಲ್ಲಿ ಬರುತ್ತೇನೆ’ ಎಂದು ಒಳಹೋಗಿ ಸಾವಿಗೆ ಶರಣಾಗಿದ್ದಾರೆ. 20 ನಿಮಿಷ ಕಳೆದರೂ ಹೊರಬರದಿದ್ದಾಗ ಪೊಲೀಸರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ವಿವರಿಸಿದ್ದಾರೆ.
ಈ ಸಾವಿನ ಹಿಂದೆ ಐಟಿ ಕಿರುಕುಳದ ಆರೋಪ ಕೇಳಿಬರುತ್ತಿದ್ದರೂ, ಗೃಹ ಸಚಿವರು ಮಾತ್ರ ಸದ್ಯಕ್ಕೆ ‘ಸಾವಿನ ಆಂಗಲ್’ನಲ್ಲಿ ಮಾತ್ರ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದಾರೆ. “ಕುಟುಂಬದವರು ಐಟಿ ದಾಳಿಯ ಕಿರುಕುಳದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ, ಆದರೆ ತನಿಖಾ ವರದಿ ಬಂದ ನಂತರವಷ್ಟೇ ಸತ್ಯಾಂಶ ತಿಳಿಯಲಿದೆ” ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕಿರುಕುಳದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಾಥಮಿಕ ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಸದ್ಯ ಪೊಲೀಸರು ರಾಯ್ ಅವರ ಕೊನೆಯ ಕರೆಗಳು ಮತ್ತು ಸಾವಿಗೂ ಮುನ್ನ ಅವರ ಮನಸ್ಥಿತಿ ಹೇಗಿತ್ತು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
