ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಗಳೇ ಹಣಕ್ಕಾಗಿ ಆರೋಪಿಗಳೊಂದಿಗೆ ಶಾಮೀಲಾಗಿ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೊಂದು ಬೆಳಗಾವಿಯ ಡಿ.ಸಿ.ಆರ್.ಇ ವಿಭಾಗದ ವಿರುದ್ಧ ಕೇಳಿಬಂದಿದೆ. ಪ್ರಕರಣವೊಂದರ ತನಿಖೆಗೆ ಲಂಚ ಪಡೆದು, ಈಗ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ರಮೇಶ ಅಣ್ಣಪ್ಪಾ ನಿಡಗುಂದಿ ಎಂಬುವವರು ಬೆಂಗಳೂರಿನ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಅವರಿಗೆ ದೂರು ನೀಡಿದ್ದಾರೆ.

ಗೋಕಾಕ ತಾಲೂಕಿನ ಮಾಲದಿನ್ನಿ ಗ್ರಾಮದಲ್ಲಿ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ರಮೇಶ ನಿಡಗುಂದಿ ಅವರಿಗೆ ಸೇರಿದ 114 ಎಕರೆ ಜಮೀನುಯಿದ್ದು ಅದು, ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೇರೆಯವರು ಹಕ್ಕು ಬಿಟ್ಟು ಪತ್ರವನ್ನು ರಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಲು ಸೆಪ್ಟೆಂಬರ್ 3, 2025 ರಂದು ಗೋಕಾಕಕ್ಕೆ ತೆರಳಿದ್ದಾಗ, ಲಕ್ಕಪ್ಪಾ ರಾಮೋಜಿ ಮಾಳಗಿ ಮತ್ತು ಸಂಗಡಿಗರು ಅವರನ್ನು ಅಪಹರಿಸಿ, ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕುರಿತು ಗೋಕಾಕ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂತ್ರಸ್ತರು ಪರಿಶಿಷ್ಟ ಜಾತಿಗೆ ಸೇರಿದವರಾದ್ದರಿಂದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಬೆಳಗಾವಿ ಡಿ.ಸಿ.ಆರ್.ಇ ಘಟಕಕ್ಕೆ ವರ್ಗಾಯಿಸಲಾಗಿತ್ತು. ದೂರುದಾರ ರಮೇಶ ಅವರ ಪ್ರಕಾರ, ಡಿ.ಸಿ.ಆರ್.ಇ ಎಸ್.ಪಿ. ಗಡಾದಿ ಮತ್ತು ಸಿಬ್ಬಂದಿ ಉಮೇಶ ಸಣ್ಣಗೌಡರ, ಸರಿಯಾದ ತನಿಖೆ ನಡೆಸಲು 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಡತನದ ಕಾರಣ ಅಷ್ಟೊಂದು ಹಣ ನೀಡಲಾಗದಿದ್ದರೂ, ನ್ಯಾಯ ಸಿಗಲೆಂಬ ಆಶಯದಿಂದ ರಮೇಶ ಅವರು ಫೋನ್ ಪೇ ಮೂಲಕ ಈಗಾಗಲೇ 15,000 ರೂ. ಹಣವನ್ನು ಅಧಿಕಾರಿಗಳಿಗೆ ಪಾವತಿಸಿದ್ದಾರೆ. ಹೆಚ್ಚುವರಿ ಹಣ ನೀಡಲು ನಿರಾಕರಿಸಿದ್ದರಿಂದ ಕೆರಳಿದ ಅಧಿಕಾರಿಗಳು, ಆರೋಪಿ ಲಕ್ಕಪ್ಪಾ ಮಾಳಗಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ. ಡಿಸೆಂಬರ್ 23 ರಂದು ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು, ಆರೋಪಿಗಳ ಸಮ್ಮುಖದಲ್ಲೇ ಕೇಸ್ ರಾಜೀ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಲ್ಲದೆ, “ನಿನ್ನ ಕೇಸ್ ಏನು ಮಾಡಬೇಕು ನನಗೆ ಗೊತ್ತಿದೆ, ಇಲ್ಲಿಂದ ಹೊರಗೆ ಹೋಗು” ಎಂದು ಸಂತ್ರಸ್ತನಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ರಮೇಶ ಅವರು, ತಾವು ಹಣ ನೀಡಿದ ಫೋನ್ ಪೇ ರಶೀದಿ ಹಾಗೂ ಅಧಿಕಾರಿಗಳ ಸಿಬ್ಬಂದಿ ತಮಗೆ ಕರೆ ಮಾಡಿ ತನಿಖೆಯಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ತಿಳಿಸಿರುವ ಆಡಿಯೋ ರೆಕಾರ್ಡಿಂಗ್ ಇರುವ ಪೆನ್ ಡ್ರೈವ್ ಅನ್ನು ಐ.ಜಿ.ಪಿ ಅವರಿಗೆ ಸಾಕ್ಷಿಯಾಗಿ ಸಲ್ಲಿಸಿದ್ದಾರೆ. “ನನಗೆ ಅನ್ಯಾಯವಾಗಿದೆ ಎಂದು ನ್ಯಾಯ ಕೇಳಲು ಹೋದರೆ, ಎಸ್.ಪಿ. ಅವರೇ ಸ್ವತಃ ಬಾಗಿಲು ತೆಗೆದು ನನ್ನನ್ನು ಹೊರಗೆ ಹಾಕಿದ್ದಾರೆ. ರಾಜಕೀಯ ಮತ್ತು ಹಣದ ಬಲದಿಂದ ಆರೋಪಿಗಳನ್ನು ಪ್ರಕರಣದಿಂದ ಕೈಬಿಡಲು ಸಂಚು ನಡೆಯುತ್ತಿದೆ,” ಎಂದು ಸಂತ್ರಸ್ತ ರಮೇಶ ಅಳಲು ತೋಡಿಕೊಂಡಿದ್ದಾರೆ.
ಈಗ ಇಡೀ ಪ್ರಕರಣದ ಚೆಂಡು ಬೆಂಗಳೂರಿನ ಉನ್ನತ ಪೊಲೀಸ್ ಅಧಿಕಾರಿಗಳ ಅಂಗಳದಲ್ಲಿದ್ದು, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
