Belagavi

ಘಟಪ್ರಭಾದಲ್ಲಿ ಗಾಂಜಾ ನಶೆಯಲ್ಲಿದ್ದ ಇಬ್ಬರ ಬಂಧನ: ಮೀರಜ್ ಲಿಂಕ್ ಪತ್ತೆ

Share

• ಗಾಂಜಾ ಸೇವಿಸುತ್ತಿದ್ದ ಇಬ್ಬರ ಬಂಧನ
• ಘಟಪ್ರಭಾ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
• ಮಹಾರಾಷ್ಟ್ರದ ಮೀರಜ್‌ನಿಂದ ಗಾಂಜಾ ಸರಬರಾಜು
• ಆರೋಪಿಗಳ ಮೇಲೆ ಎನ್‌ಡಿಪಿಎಸ್ ಕೇಸ್

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಘಟಪ್ರಭಾ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತರಿಂದ ಗಾಂಜಾ ಜಾಲದ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದ್ದು, ಪೊಲೀಸ್ ತನಿಖೆ ಚುರುಕುಗೊಂಡಿದೆ.
ಮಲ್ಲಾಪೂರ ಪಿ.ಜಿ. ಗ್ರಾಮದ ಕಾಳಿಕಾ ದೇವಿ ಗುಡಿಯ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಲ್ಲದ ಪೇಟೆಯ ಮುಜಮಿಲ್ ಗುಲಾಮಹೈದರ ಇರಾನಿ (20) ಮತ್ತು ಹುಸೇನ ಮೇರಾಜಹುಸೇನ ಇರಾನಿ (25) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಬಂಧಿತರು ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದು, ತಾವು ಸೇವನೆ ಮಾಡುತ್ತಿದ್ದ ಗಾಂಜಾವನ್ನು ಮಹಾರಾಷ್ಟ್ರ ರಾಜ್ಯದ ಮೀರಜ್‌ನಿಂದ ತರುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಗಾಂಜಾ ಜಾಲದ ಮೂಲವನ್ನು ಪತ್ತೆಹಚ್ಚಲು ಮತ್ತು ಸರಬರಾಜುದಾರರನ್ನು ಬಂಧಿಸಲು ಪೊಲೀಸ್ ಇಲಾಖೆಯು ಈಗಾಗಲೇ ವಿಶೇಷ ತಂಡಗಳನ್ನು ರಚಿಸಿದೆ. ಸದ್ಯ ಪ್ರಕರಣವು ತನಿಖಾ ಹಂತದಲ್ಲಿದ್ದು, ಗಾಂಜಾ ಮಾಫಿಯಾದ ಹಗೇವು ಕಿತ್ತುಹಾಕಲು ಪೊಲೀಸರು ಸಜ್ಜಾಗಿದ್ದಾರೆ.

Tags:

error: Content is protected !!