ಬಾಗಲಕೋಟೆಯ ಜಮಖಂಡಿಯಲ್ಲಿ ರಾಜಕೀಯ ಬದ್ಧ ವೈರಿಗಳೆಂದೇ ಕರೆಯಲ್ಪಡುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಯತ್ನಾಳ್ ಅವರನ್ನು ಕ್ರಿಕೆಟ್ ಆಲ್’ರೌಂಡರ್’ಗೆ ಹೋಲಿಸಿದ ನಿರಾಣಿ, ಯತ್ನಾಳ್ ಅವರ ರಾಜಕೀಯ ಶೈಲಿಗೆ ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.

ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ನಡೆದ ಕೊಣ್ಣೂರು ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ, “ಯತ್ನಾಳ್ ಗೌಡ್ರು ಉತ್ತಮ ಬ್ಯಾಟ್ಸ್’ಮನ್, ಬೌಲರ್ ಹಾಗೂ ಫೀಲ್ಡರ್ ಆಗಿರುವ ಆಲ್’ರೌಂಡರ್ ಇದ್ದಂತೆ. ಆದರೆ ಮ್ಯಾನ್ ಆಫ್ ದಿ ಮ್ಯಾಚ್ ಆಗಬೇಕೆಂದರೆ ಬಂದ ಬಾಲಿಗೆಲ್ಲ ಸಿಕ್ಸರ್ ಹೊಡೆಯಬೇಡಿ, ಕೇವಲ ಒಳ್ಳೆಯ ಬಾಲ್ ಬಂದಾಗ ಮಾತ್ರ ಸಿಕ್ಸರ್ ಬಾರಿಸಿ” ಎಂದು ಸಲಹೆ ನೀಡಿದರು. ಈ ವೇಳೆ ಅಖಂಡ ವಿಜಯಪುರ ಜಿಲ್ಲೆಯ ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟಿನ ಮಂತ್ರವನ್ನೂ ಜಪಿಸಿದರು.
