Bagalkot

ಬಾಗಲಕೋಟೆಯಲ್ಲಿ ನಿಲ್ಲದ ಬೀದಿ ನಾಯಿಗಳ ಅಟ್ಟಹಾಸ – ಶಾಲಾ ಬಾಲಕಿಯ ಮೇಲೆ ಭೀಕರ ದಾಳಿ!

Share

ಬಾಗಲಕೋಟೆಯ ಜಿಲ್ಲಾ ಕೇಂದ್ರದಲ್ಲಿ ಬೀದಿ ನಾಯಿಗಳ ದಾಳಿ ಮುಂದುವರಿದಿದ್ದು, ಇಂದು ನಗರದ ವಿದ್ಯಾಗಿರಿ ಬಡಾವಣೆಯಲ್ಲಿ ಎಲ್.ಕೆ.ಜಿ ಕಲಿಯುತ್ತಿರುವ ಪುಟ್ಟ ಬಾಲಕಿಯೊಬ್ಬಳ ಮೇಲೆ ನಾಯಿಗಳು ಅಮಾನವೀಯವಾಗಿ ದಾಳಿ ನಡೆಸಿವೆ.

ಬಾಗಲಕೋಟೆಯ ಬಿವಿವಿಎಸ್ ಶಾಲೆಯ ಎಲ್.ಕೆ.ಜಿ ವಿದ್ಯಾರ್ಥಿನಿ ಅನನ್ಯ ಹುಚ್ಚೇಶ ತೇಗ್ಗಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಿದ್ಯಾಗಿರಿ ಬಡಾವಣೆಯ ರಸ್ತೆಯಲ್ಲಿ ಏಕಾಏಕಿ ನುಗ್ಗಿದ ಬೀದಿ ನಾಯಿಗಳ ಹಿಂಡು, ಬಾಲಕಿಯ ಮೇಲೆರಗಿ ಮೈಯೆಲ್ಲ ಪರಿಚಿ ಗಾಯಗೊಳಿಸಿವೆ.

ನಾಯಿಗಳು ಬಾಲಕಿಯನ್ನು ಕಚ್ಚಿ ಎಳೆಯುತ್ತಿದ್ದಾಗ ಅದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಧಾವಿಸಿದ್ದಾರೆ. ನಾಯಿಗಳ ಮೇಲೆ ಕಲ್ಲು ಎಸೆದು ಅವುಗಳನ್ನು ಓಡಿಸುವ ಮೂಲಕ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯ ಮೈಯೆಲ್ಲ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದರೂ ನಗರಸಭೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಟ್ಟ ಮಕ್ಕಳೂ ಕೂಡ ಮನೆಯಿಂದ ಹೊರಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Tags:

error: Content is protected !!