ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ನಾವು ಇಂದಿಗೂ ಕೂಡ ಮೌಢ್ಯಗಳನ್ನು ಆಚರಿಸಲಾಗುತ್ತಿರುವುದು ದುರ್ದೈವದ ಸಂಗತಿ. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಬೇಕು. ಭ್ರಾತೃತ್ವ, ಸ್ವಾತಂತ್ರ್ಯ , ಸಮಾನತೆಗಳನ್ನು ಸಂವಿಧಾನ ತಿಳಿಸಿದ್ದು, ಇದು ಅಕ್ಷರಶ: ಜಾರಿಯಾಗದೇ, ಜಾತಿ ವ್ಯವಸ್ಥೆಯಾಗಲಿ, ಅಸಮಾನತೆಯಾಗಲಿ ಹೋಗುವುದಿಲ್ಲ. ಮಾನವರಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಿಕ್ಷಣ ಅಗತ್ಯ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.


ಅವರು ಇಂದು ಚಂದನ ಎಜ್ಯುಕೇಷನ್ ಸೊಸೈಟಿ ಲಕ್ಷ್ಮೇಶ್ವರ ಇವರ ವತಿಯಿಂದ ಆಯೋಜಿಸಲಾಗಿದ್ದ ಭಾರತ ರತ್ನ ಪ್ರೋ ಸಿ ಎನ್ ಆರ್ ರಾವ್ 10 ನೇ ವರ್ಷದ ವಿಜ್ಞಾನ ವಿಸ್ಕೃತ ಕಾರ್ಯಕ್ರಮ-2025 ಹಾಗೂ ಶ್ರೀ ಬಿ ಎಸ್ ಪಾಟೀಲ ಇವರಿಗೆ 2025 ನೇ ಸಾಲಿನ ಪ್ರತಿಷ್ಠಿತ ಚಂದನ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಎಲ್ಲ ಧರ್ಮಗಳೂ ಮಾನವೀಯತೆಯನ್ನು ಬೋಧಿಸುತ್ತವೆ. ಪಟ್ಟಭದ್ರಹಿತಾಸಕ್ತಿಗಳು ಧರ್ಮವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಕಷ್ಟದಲ್ಲಿದ್ದಾಗ ತನ್ನ ಹಣೆಬರಹವೆಂದು ಸುಮ್ಮನಿರದೇ, ಇಚ್ಛಾಶಕ್ತಿಯಿಂದ ಶ್ರಮಿಸಿದರೆ, ಯಾವುದೇ ವರ್ಗದವರೂ ಕೂಡ ಸಾಧನೆಗಳನ್ನು ಮಾಡಬಹುದಾಗಿದೆ. ಶಿಕ್ಷಣವೆಂಬುದು ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶಗಳನ್ನು ಸದುಪಯೋಗ ಪಡೆದು, ಉನ್ನತ ಸ್ಥಾನಕ್ಕೆ ತಲುಪಬಹುದು. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ವಿಜ್ಞಾನದ ಉದ್ದೇಶ ಎಂದರು.

ಬಸವಣ್ಣ ಇವನ್ಯಾರವ ಎನ್ನದಿರಿ ಎಂದು 850 ವರ್ಷಗಳ ಹಿಂದೆಯೇ ಹೇಳಿದ್ದರು. ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ 76% ನಾವು ಸಾಕ್ಷರತೆ ಸಾಧಿಸಿದ್ದರೂ ಜಾತೀಯತೆ ಹೋಗಿಲ್ಲ. ಸುಶಿಕ್ಷಿತರಲ್ಲೇ ಜಾತೀಯತೆಯನ್ನು ಹೆಚ್ಚಾಗಿ ಕಾಣುತ್ತಿದ್ದು ಇದು ಹೋಗಬೇಕಿದೆ ಎಂದರು.

