Bagalkot

ಜಿಲ್ಲಾಡಳಿತ ಭವನದ ಆವರಣದಲ್ಲೇ ಶ್ರೀಗಂಧ ಮರ ಕಳವು: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಗಂಧದ ಮರ?

Share

ಜಿಲ್ಲಾಡಳಿತ ಭವನದ ಆವರಣದಲ್ಲಿ, ಅದರಲ್ಲೂ ಅಂಬೇಡ್ಕರ್ ಉದ್ಯಾನವನದಂತಹ ಸೂಕ್ಷ್ಮ ಪ್ರದೇಶದಲ್ಲಿ ಶ್ರೀಗಂಧದ ಮರವನ್ನು ಕಡಿದು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿಗಳ ಕಚೇರಿ ಇರುವ ಆವರಣದಲ್ಲೇ ಈ ರೀತಿಯ ಘಟನೆ ನಡೆದಿರುವುದು ಅಧಿಕಾರಿಗಳ ಭದ್ರತಾ ನಿರ್ವಹಣೆ ಮತ್ತು ಕರ್ತವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಅಂಬೇಡ್ಕರ್ ಉದ್ಯಾನವನದ ಒಂದು ಶ್ರೀಗಂಧದ ಮರವನ್ನು ದುಷ್ಕರ್ಮಿಗಳು ಸುಮಾರು 15-20 ದಿನಗಳ ಹಿಂದೆಯೇ ಮಷಿನ್ ಬಳಸಿ ಕಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳ್ಳರು ಶ್ರೀಗಂಧದ ಹೆಚ್ಚು ಬೆಲೆಯುಳ್ಳ, ಲೇಪದ ಭಾಗದ ತುಂಡನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದ ಎರಡು ತುಂಡುಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಈ ಮರದ ತುಂಡುಗಳು ಜಿಲ್ಲಾಡಳಿತ ಭವನದ ಆವರಣದಲ್ಲೇ ಅನಾಥವಾಗಿ ಬಿದ್ದಿದ್ದರೂ, ಯಾವುದೇ ಅಧಿಕಾರಿಗಳು ಇತ್ತ ತಿರುಗಿಯೂ ನೋಡದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಸರಕಾರಿ ಆಡಳಿತದ ಪ್ರಮುಖ ಕೇಂದ್ರವಾದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಮರವನ್ನೇ ಉಳಿಸಿಕೊಳ್ಳಲು ಅಥವಾ ಕಳ್ಳತನವಾದ ನಂತರ ಅದರ ತುಂಡುಗಳನ್ನು ವಶಪಡಿಸಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.

“ಜಿಲ್ಲಾಧಿಕಾರಿಗಳೇ, ನಿಮ್ಮ ಅಧಿಕಾರಿಗಳು ಯಾಕಿಷ್ಟು ಅಷಡ್ಯ?” ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಮರವನ್ನೇ ಉಳಿಸಿಕೊಳ್ಳದ ಅಧಿಕಾರಿಗಳು, ಇನ್ನು ಅರಣ್ಯದಲ್ಲಿರುವ ಶ್ರೀಗಂಧದ ಮರಗಳನ್ನು ಹೇಗೆ ರಕ್ಷಿಸುತ್ತಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಈ ಬೆಲೆಬಾಳುವ ಮರ ಬಲಿಯಾಗಿದೆಯೇ ಎಂಬ ಅನುಮಾನ ಮೂಡಿದೆ.

Tags:

error: Content is protected !!