ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಕಳ್ಳತನಕ್ಕೆ ಬಂದಿದ್ದ ಮುಸುಕುಧಾರಿಯನ್ನು ಹಿಡಿಯಲು ಹೋದ ಮೆಹಬೂಬ್ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಅಜಾದ್ ನಗರದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಕಳ್ಳರು ಪೊಲೀಸರಿಗೇ ಸವಾಲು ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಮೂವರು ಪೊಲೀಸ್ ಸಿಬ್ಬಂದಿಗಳ ಮನೆಗೆ ಕನ್ನ ಹಾಕಿದ್ದ ಕಳ್ಳರು, ಈಗ ಅಜಾದ್ ನಗರದಲ್ಲಿ ಅಟ್ಟಹಾಸ ಮೆರೆದಿದ್ದಾರೆ.
ರಾತ್ರಿ ಅಜಾದ್ ನಗರದ ಮನೆಯೊಂದಕ್ಕೆ ಕಳ್ಳತನ ಮಾಡಲು ಮುಸುಕುಧಾರಿಗಳು ನುಗ್ಗಿದ್ದರು. ಈ ವೇಳೆ ಸ್ಥಳೀಯ ನಿವಾಸಿ ಮೆಹಬೂಬ್ ಅವರು ಮುಸುಕುಧಾರಿಯನ್ನು ಹಿಡಿಯಲು ಪ್ರಯತ್ನಿಸಿದಾಗ, ಕಳ್ಳನು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಮೆಹಬೂಬ್ ಅವರ ಚೀರಾಟ ಕೇಳಿ ಸ್ಥಳೀಯರು ಓಡಿ ಬರುವಷ್ಟರಲ್ಲಿ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಕುರಿತು ಮಾತನಾಡಿದ ಸ್ಥಳೀಯ ಮುಖಂಡ ಇವತ್ತು ಕಾನೂನು ಸುವ್ಯವಸ್ಥೆಯ ಭಯ ಕಳ್ಳರಿಗೆ ಇಲ್ಲದಂತಾಗಿದೆ. ಆಯಾ ಪ್ರದೇಶಕ್ಕೆ ನೇಮಿಸಿರುವಂತಹ ಬೀಟ್ ಪೊಲೀಸರು ತಮ್ಮ ಕಾರ್ಯವನ್ನು ಮಾಡಬೇಕು ಅದೇರೀತಿಯಾಗಿ ಹೆದ್ದಾರಿ ಗಸ್ತು ವಾಹನದವರೂ ಸೈರನ್ ಹೊಡೆಯುವುದರ ಮೂಲಕ ಎಚ್ಚರಿಸಬೇಕು ಪುರಸಭೆಯವರು 36 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದರೂ ಉಪಯೋಗಕ್ಕೆ ಬಾರದಂತೆ ಆಗಿದೆ ಅವುಗಳನ್ನು ರಿಪೇರಿ ಮಾಡುವಂತಹ ಕೆಲಸ ಆಗಬೇಕು. ಇಲ್ಲಿ ಸೇವೆಯನ್ನು ಮಾಡುವಂತಹ ಅಧಿಕಾರಿಗಳು ಅಲರ್ಟ್ ಆಗಬೇಕೆಂದು ಮನವಿ ನೀಡುತ್ತೇವೆ ಎಂದು ಹೇಳಿದರು.
ಈ ಘಟನೆಯಿಂದ ಪಟ್ಟಣದ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಜಾದ್ ನಗರದ ನಿವಾಸಿಗಳು ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳ್ಳರ ಬಂಧನಕ್ಕೆ ಒತ್ತಾಯಿಸಿದ್ದಾರೆ.
