hubbali

ಪ್ರೀತಿಸಿ ಮದುವೆಯಾದ ಗರ್ಭಿಣಿ ಕೊಲೆ ಮಾಡಿದ ಪೋಷಕರು

Share

ಅವರಿಬ್ಬರೂ ಒಂದೇ ಗ್ರಾಮದವರು. ಇಬ್ಬರು ಕಾಲೇಜು ಓದುವಾಗ ಪ್ರೀತಿಸಿದ್ದರು.ಆದ್ರೆ ಇಬ್ಬರ ಪ್ರೀತಿಗೆ ಜಾತಿ ಅಡ್ಡುಗೋಡೆಯಾಗಿತ್ತು. ಯುವತಿ ಹೆತ್ತವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಏಳು ತಿಂಗಳ ಗರ್ಭಿಣಿ ಮಗಳನ್ನೇ ಹೆತ್ತ ತಂದೆ ಇಂದು ಬರ್ಬರ ಕೊಲೆ ಮಾಡಿದ್ದಾನೆ.

ಧಾರವಾಡ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ. ಪ್ರೀತಿಸಿ ವಿವಾಹವಾಗಿದ್ದ ಮಗಳನ್ನೇ ಕೊಲೆ ಮಾಡಿದ ಪಾಪಿ ತಂದೆ ದಯವಿಟ್ಟು ನಮಗೆ ನ್ಯಾಯ ಬೇಕು ಅಂತ ಪೊಲೀಸರಿಗೆ ಮನವಿ ಮಾಡ್ತಿರೋ ಕುಟುಂಬ. ಮತ್ತೊಂದಡೆ ಕಣ್ಣೀರು ಹಾಕ್ತಿರೋ ಮಹಿಳೆಯರು. ಇವರ ನೋವು ಮತ್ತು ಆತಂಕಕ್ಕೆ ಕಾರಣ ಇಂದು ನಡೆದ ಮರ್ಯಾದೆ ಹತ್ಯೆ.


ಹೌದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಹೆತ್ತ ತಂದೆಯೇ ಮಗಳನ್ನು ಕೊಲೆ ಮಾಡಿದ್ದಾನೆ. ಇನಾಂವೀರಾಪುರ ಗ್ರಾಮದ ವಿವೇಕಾನಂದ ಮತ್ತು ಅದೇ ಗ್ರಾಮದ ಮಾನ್ಯಾ ಅನೇಕ ವರ್ಷಗಳ ಕಾಲ ಪ್ರೀತಿಸಿದ್ದರು. ಮಾನ್ಯ ವರೂರು ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ಸಮಯದಲ್ಲಿ ವಿವೇಕಾನಂದ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ. ಇಬ್ಬರಿಗೂ ಮೊದಲು ಪರಿಚಯವಿತ್ತು. ಆದ್ರೆ ಡಿಗ್ರಿ ಓದುವಾಗ ಇನ್ಸಟಾಗ್ರಾಂ ನಲ್ಲಿ ಮೆಸೆಜ್ ಮಾಡ್ತಾ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಇಬ್ಬರು ಪ್ರೀತಿಸುತ್ತಿದ್ದ‌ ವಿಚಾರ ಎರಡು ಮನೆಯವರಿಗೆ ಗೊತ್ತಾಗಿತ್ತು. ಯುವತಿ ಲಿಂಗಾಯತ ಸಮಾಜದವಳಾಗಿದ್ದರೆ ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದ್ದ. ಹೀಗಾಗಿ ಯುವತಿ ಮನೆಯವರು ಮದುವೆಗೆ ವಿರೋಧ ಮಾಡಿದ್ದರು. ಆದ್ರೆ ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದ ಬಿಟ್ಟು ಬದಕೋದಿಲ್ಲಾ ಅಂತ ಹಠ ಹಿಡಿದಿದ್ದಳಂತೆ.‌ಧಾರವಾಡದಲ್ಲಿ ಕೋಚಿಂಗ್ ಗೆ ಹೋಗಿದ್ದ‌ ವಿವೇಕಾನಂದ ಬಳಿ ಹೋಗಿ ಮದುವೆಯಾಗದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಳಂತೆ. ಹೀಗಾಗಿ ವಿವೇಕಾನಂದ ಮಾನ್ಯಾಳ ಜೊತೆ ಕಳೆದ ಜೂನ್ 19 ರಂದು ಹುಬ್ಬಳ್ಳಿಯಲ್ಲಿ ಸಬ್ ರಿಜಿಸ್ಟರ್ ವಿವಾಹವಾಗಿದ್ದ. ಈ ಸಮಯದಲ್ಲಿ ಪೊಲೀಸರು ಎರಡು ಕುಟುಂಬ ಕರೆದು ರಾಜಿ ಪಂಚಾಯತಿ ಮಾಡಿದ್ದರಂತೆ.‌ಇನ್ನು ಮಾನ್ಯಾ ಮತ್ತು ವಿವೇಕಾನಂದ ಊರು ಬಿಟ್ಟು ಹೋಗಿ ಹಾವೇರಿಯಲ್ಲಿ ವಾಸವಾಗಿದ್ದರಂತೆ. ಮಾನ್ಯಾ ಗರ್ಭಿಣಿ ಯಾಗಿದ್ದಳು. ಮಾನ್ಯ ಹೆತ್ತವರು ಮತ್ತೆ ಇಬ್ಬರನ್ನು ಕೊಲೆ ಮಾಡಲು ಮುಂದಾಗಿದ್ದರಂತೆ. ಹೀಗಾಗಿ ಮಾನ್ಯ ಮತ್ತು ವಿವೇಕಾನಂದ ಡಿಸೆಂಬರ್ 8 ರಂದು ಸ್ವ ಗ್ರಾಮಕ್ಕೆ ಹಿಂತಿರುಗಿದ್ದರು. ಈ ಸಮಯದಲ್ಲಿ ಕೂಡಾ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರನ್ನು ಕರೆಸಿ, ರಾಜಿ ಸಂದಾನ ಮಾಡಿಸಿದ್ದರಂತೆ. ಆದ್ರೆ ಇಂದು ಸಂಜೆ ಮತ್ತೆ ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ ಮಾನ್ಯ ತಂದೆ ಪ್ರಕಾಶಗೌಡ ಪಾಟೀಲ್ ಮತ್ತು ಸಂಬಂಧಿಗಳು ಮಾನ್ಯಾ ಮತ್ತು ಮನೆಯಲ್ಲಿದ್ದ ಆಕೆಯ ಅತ್ತೆ ಸೇರಿದಂತೆ ಮೂ‌ವರ ಮೇಲೆ ಹಲ್ಲೆ ಮಾಡಿದ್ದರು.

ಮಾನ್ಯಳಿಗೆ ಪೈಪ್ ಮತ್ತು ಗುದ್ದಲಿಯಿಂದ ಪ್ರಕಾಶಗೌಡ ಹಲ್ಲೆ ಮಾಡಿದ್ದ.ನಂತರ ಮಾನ್ಯಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಾನ್ಯಾ ಬಾರದ ಲೋಕಕ್ಕೆ ಹೋಗಿದ್ದಾಳೆ. ಇತ್ತ ಮಾನ್ಯಾಳ ಅತ್ತೆ ಮಾವ ಸೇರಿ ಮೂವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಎಸ್ಪಿ ಗುಂಜನ್ ಆರ್ಯ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಸದ್ಯ ಮಾನ್ಯಾಳ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಆದ್ರೆ ಪ್ರೀತಿಸಿ ಮದುವೆಯಾಗಿ ತನ್ನ ಪಾಡಿಗೆ ತಾನು ಜೀವನ ಕಟ್ಟಿಕೊಂಡಿದ್ದ ಮಗಳನ್ನು ಸ್ವತ ತಂದೆಯೇ ಮರ್ಯಾದೆ ಕೊಲೆ ಮಾಡಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.

Tags:

error: Content is protected !!