ರಾಜ್ಯ ರಾಜಕೀಯದಲ್ಲಿ ಸದಾ ಕುತೂಹಲ ಕೆರಳಿಸುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಹಾಗೂ ರಾಜ್ಯದ ಭವಿಷ್ಯದ ಕುರಿತು ಬೆಳಗಾವಿಯಲ್ಲಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಬದಲಾವಣೆ ಮತ್ತು ಮುಂಬರುವ ವರ್ಷದ ಗಂಡಾಂತರಗಳ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳ ನಡುವೆಯೇ ಸ್ವಾಮೀಜಿ ನೀಡಿರುವ ಈ ಹೇಳಿಕೆ ಸಂಚಲನ ಮೂಡಿಸಿದೆ. “ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಅಷ್ಟು ಸುಲಭವಲ್ಲ. ಸಿದ್ದರಾಮಯ್ಯ ಅವರು ಅವರಾಗಿಯೇ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶ ಸಿಗಲಿದೆ. ಇಲ್ಲವಾದರೆ ಬೇರೆಯವರು ಅಧಿಕಾರ ಹಿಡಿಯುವುದು ಕಷ್ಟ,” ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯಕ್ಕೆ ಸಿಎಂ ಪಟ್ಟ ಸಿಗುವುದು ಅನುಮಾನ ಎಂಬ ಮುನ್ಸೂಚನೆ ನೀಡಿದ್ದಾರೆ.
ರಾಜಕೀಯ ಬಗ್ಗೆ ಶ್ರೀಗಳು, “ಅರಸನ ಅರಮನೆಗೆ ಕಾರ್ಮೋಡ ಕವಿದಿದೆ. ಅರಸನ ಬಂಡಾರ (ಬಜೆಟ್) ಮುಗಿದ ನಂತರ ಅವರಾಗಿಯೇ ಅಧಿಕಾರ ಬಿಟ್ಟರೆ ಸಾಧ್ಯವಿದೆ. ಇಲ್ಲದಿದ್ದರೆ ಪರಿಸ್ಥಿತಿ ಕಷ್ಟಕರವಾಗಲಿದೆ. ಇದು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಕೇಂದ್ರದಲ್ಲೂ ರಾಜಕೀಯ ಏರುಪೇರುಗಳು ಉಂಟಾಗಲಿವೆ,” ಎಂದು ಭವಿಷ್ಯ ನುಡಿದಿದ್ದಾರೆ.
ಕೇವಲ ರಾಜಕೀಯ ಮಾತ್ರವಲ್ಲದೆ ಪ್ರಕೃತಿಯ ವಿಕೋಪದ ಬಗ್ಗೆಯೂ ಶ್ರೀಗಳು ಎಚ್ಚರಿಸಿದ್ದಾರೆ. 2025ಕ್ಕಿಂತಲೂ 2026ರ ವರ್ಷ ಹೆಚ್ಚು ಕಷ್ಟಕರವಾಗಿರಲಿದೆ. ಯುಗಾದಿ ವೇಳೆಗೆ ಜಗತ್ತಿನ ಎಂಟರಿಂದ ಹತ್ತು ಪ್ರತಿಶತದಷ್ಟು ಭಾಗ ಮುಳುಗಿ ಹೋಗುವ ಲಕ್ಷಣಗಳಿವೆ. ಜನವರಿ 14ರ ಸಂಕ್ರಾಂತಿ ಕಳೆದ ಮೇಲೆ ರಾಜರು, ಮಹಾರಾಜರು ಮತ್ತು ವ್ಯಾಪಾರಸ್ಥರ ಭವಿಷ್ಯದ ಬಗ್ಗೆ ನಿಖರವಾಗಿ ಹೇಳಬಹುದು. ಯುಗಾದಿ ಕಳೆದ ನಂತರ ಮಳೆ, ಬೆಳೆ ಮತ್ತು ರೈತರ ಸ್ಥಿತಿಗತಿಗಳ ಬಗ್ಗೆ ವಿಸ್ತೃತವಾಗಿ ತಿಳಿಸುವುದಾಗಿ ಅವರು ಹೇಳಿದ್ದಾರೆ.
“ಪ್ರಸ್ತುತ ದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸಂಕ್ರಾಂತಿ ಕಳೆದ ಮೇಲೆ ಸೂರ್ಯ ಉತ್ತರಾಯಣಕ್ಕೆ ಚಲಿಸಿದಾಗ ಬದಲಾವಣೆಗಳು ಗೋಚರಿಸಲಿವೆ,” ಎಂದು ಕೋಡಿಶ್ರೀಗಳು ತಮ್ಮ ಭವಿಷ್ಯವಾಣಿಯನ್ನು ಮುಕ್ತಾಯಗೊಳಿಸಿದ್ದಾರೆ.

