ಬೆಳಗಾವಿ ಜಿಲ್ಲಾಧಿಕಾರಿಗಳ ವಿರುದ್ಧ ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆ ಅವರು ಲೋಕಸಭಾ ಸ್ಪೀಕರ್ ಅವರಿಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನವದೆಹಲಿಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮಾನ್ಯ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಸಂಸದರ ಯಾವುದೇ ಹಕ್ಕುಚ್ಯುತಿ ಉಲ್ಲಂಘಣೆ ಆಗಿಲ್ಲವೆಂದು ಸಮಗ್ರ ವಿಷಯದ ಕುರಿತು ವಿವರ ನೀಡಿ, ವಿಶೇಷ ಅಧಿಕಾರ ಕ್ರಮ ಕೈಗೊಳ್ಳಬಾರದೆಂದು ಮನವಿ ನೀಡಿ ಆಗ್ರಹಿಸಿದರು.


ಸೋಮವಾರ ನವದೆಹಲಿಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಬೆಳಗಾವಿ ಮಹಾನಗರವು ಮೂರು ರಾಜ್ಯಗಳ ಗಡಿಗೆ (ಕರ್ನಾಟಕ, ಮಹಾರಾಷ್ಟç, ಗೋವಾ) ಹೊಂದಿಕೊಂಡಿರುವ ಜಿಲ್ಲೆಯಾಗಿದ್ದು, ಇಲ್ಲಿ ವಾಸವಾಗಿರುವ ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ನಾಗರಿಕರು ಸೌಹಾರ್ದಯುತವಾಗಿ ಸಹೋದರತ್ವ ಭಾವನೆಯಿಂದ ಸಾಮರಸ್ಯದ ಬದುಕು ನಡೆಸುತ್ತಿದ್ದಾರೆ ಆದರೆ ಕೆಲವು ಸಂಘಟನೆಗಳು ನವೆಂಬರ್ 1 ರ “ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಮತ್ತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಶೇಷ ಅಧಿವೇಶನದ ಸಂದರ್ಭಗಳಲ್ಲಿ ಕರಾಳ ದಿನಾಚರಣೆ ಹಾಗೂ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಇಂತಹ ಪ್ರತಿಭಟನಾ ಸಭೆಗಳಿಗೆ ಪಕ್ಕದ ರಾಜ್ಯದಿಂದ ಹಲವಾರು ನಾಯಕರು ಆಗಮಿಸಿ ಪ್ರಚೋದನಾತ್ಮಕ ಭಾಷಣ ಮಾಡುವ ಕಾರಣ ಅನವಶ್ಯಕ ಗೊಂದಲಗಳು ಉಂಟಾಗುತ್ತವೆ. ಹೀಗಿರುವಾಗ ಜಿಲ್ಲಾಡಳಿತ ಇಲ್ಲಿ ವಾಸವಾಗಿರುವ ಎಲ್ಲ ಭಾಷಿಕ ಜನರ ಹಿತಾಶಕ್ತಿಯನ್ನು ಕಾಪಾಡುವುದು ಅವರ ಮೊದಲ ಆಧ್ಯ ಕರ್ತವ್ಯವಾಗಿರುತ್ತದೆ.
ಆ ಹಿನ್ನಲೆಯಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳು ಕರಾಳ ದಿನಾಚರಣೆಯ ಸಭೆಗೆ ಆಗಮಿಸಲು ಉದ್ದೇಶಿಸಿದ್ದ ಸಂಸದ ಧೈರ್ಯಶೀಲ ಮಾನೆ ಅವರಿಗೆ ಬೆಳಗಾವಿ ಪ್ರವೇಶವನ್ನು ನಿರ್ಬಂಧಿಸುವ ನಿರ್ಧಾರವನ್ನು ತೆಗೆದುಕೊಂಡಿರುವುದು ಹಕ್ಕುಚ್ಯುತಿಯ ಕ್ರಮವಲ್ಲ ಬದಲಾಗಿ ಅದು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾನೂನು ಕ್ರಮವಾಗಿರುತ್ತದೆ. ಹೀಗಿರುವಾಗ ತಮಗೆ ದೂರು ನೀಡುವ ಮೂಲಕ ಸಂಸದರ ಹಕ್ಕುಚ್ಯುತಿ ಉಲ್ಲಂಘಣೆಯಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿ ತಮ್ಮನ್ನು ಆಗ್ರಹಿಸಿರುವುದು ಅತ್ಯಂತ ಅಸಮಂಜಸ ಮತ್ತು ತರ್ಕಬದ್ಧವಲ್ಲದ ಕ್ರಮವಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಹೊರಡಿಸಿರುವ ನಿಷೇಧಾಜ್ಞೆಯು ಸಂಪೂರ್ಣವಾಗಿ ಸಾಂವಿಧಾನಿಕವಾಗಿದ್ದು, ಇದು ಕಾನೂನಿನ ವ್ಯಾಪ್ತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳನ್ನು ಸಮರ್ಥನೆ ಮಾಡಿಕೊಂಡು ವಾಸ್ತವ ಸ್ಥಿತಿಗತಿಯ ಬಗ್ಗೆ ಮಾನ್ಯ ಲೋಕಸಭಾ ಸ್ಪೀಕರ್ ಅವರ ಗಮನಕ್ಕೆ ತಂದು ವಿವರ ನೀಡಿದರು.
ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಲೋಕಸಭಾ ಸ್ಪೀಕರ್ ಓಂ ಬಿರ್ಲ್ಲಾ ಅವರು ಸಂಸದ ಧೈರ್ಯಶೀಲ ಮಾನೆಯವರು ಮನವಿ ಸಲ್ಲಿಸಿದರು ಕೂಡಾ ನಾನು ಯಾವುದೇ ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳುವುದಿಲ್ಲ ಮತ್ತು ಯಾವ ಹಿನ್ನಲೆಯಲ್ಲಿ ಈ ಘಟನೆ ನಡೆದಿವೆ ಎನ್ನುವುದರ ಬಗ್ಗೆ ಪರಿಶೀಲನೆ ಮಾಡುತ್ತೇನೆ ಕರ್ನಾಟಕ ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.
