ನೀಟ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಸರಕಾರಿ ಕೋಟಾದಡಿ MBBS ಗೆ ಪ್ರವೇಶ ಪಡೆದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆಯಿಂದಾಗಿ ಕಷ್ಟಪಡುತ್ತಿದ್ದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ BLDEA ವತಿಯಿಂದ ನೆರವು ನೀಡಲಾಯಿತು. ಸಚಿವ ಎಂ.ಬಿ.ಪಾಟೀಲ ಇವರು ಸಹಾಯಧನದ ಚೆಕ್ ವಿತರಿಸಿದರು.


ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ L.T.1.ರ ವಿದ್ಯಾರ್ಥಿನಿ ದಿವ್ಯಾ ಹನಮಂತ ರಾಠೋಡ ನೀಟ್ ನಲ್ಲಿ 2,23,424 ರ್ಯಾಂಕ್ ಪಡೆದಿದ್ದು, ಬೆಂಗಳೂರಿನ ದಯಾನಂದ ಸಾಗರ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾಳೆ. ವಿಜಯಪುರ ನಗರದ ನಿವಾಸಿ ಮಂಜುನಾಥ ಲಕ್ಷ್ಮಣ ಗೊಟಗುಣಕಿ 76,372 ರ್ಯಾಂಕ್ ಪಡೆದು, ಚಿತ್ರದುರ್ಗದ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ದಿವ್ಯಾ ಹನಮಂತ ರಾಠೋಡಗೆ ಕೋರ್ಸ್ ಪೂರ್ಣಗೊಳಿಸಲು ಒಟ್ಟು ರೂ. 9,98,484 ಅಗತ್ಯವಿದ್ದು, ಮೊದಲ ವರ್ಷಕ್ಕೆ ಅಗತ್ಯವಾದ ರೂ. 2,49,621 ಹಣದ ಚೆಕ್ ಮತ್ತು ಮಂಜುನಾಥ ಗೊಟಗುಣಕಿಗೆ ಕೋರ್ಸ್ ಪೂರ್ಣಗೊಳಿಸಲು ರೂ. 6.32 ಲಕ್ಷ ಅಗತ್ಯವಿದ್ದು, ಪ್ರಥಮ ವರ್ಷಕ್ಕೆ ಅಗತ್ಯವಾದ ರೂ. 1.58 ಲಕ್ಷದ ಮೊತ್ತದ ಮೊದಲ ಕಂತಿನ ಚೆಕ್ ನ್ನು ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರ ಸಮಕ್ಷಮದಲ್ಲಿ ವಿತರಿಸಲಾಯಿತು. ಈ ವೇಳೆ ಇಬ್ಬರೂ ವಿದ್ಯಾರ್ಥಿಗಳು ಅಧ್ಯಯನಮಾಡಿ, ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ, ಆದರ್ಶ ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ತಿಳಿಸಿದರು. ಶಿಕ್ಷಣಕ್ಕೆ ನೀಡಿದ ಈ ನೆರವು, ಕನಸುಗಳಿಗೂ ಹೊಸ ಜೀವ ತುಂಬಿ, ನಾಳೆಯ ಮಾನವೀಯ ವೈದ್ಯರನ್ನು ರೂಪಿಸುವ ಭರವಸೆಯ ಹೆಜ್ಜೆಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

