ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿ ಭವನ ನಿರ್ಮಿಸುವ ಮಹಾರಾಷ್ಟ್ರ ಸರ್ಕಾರದ ಮತ್ತು ಎಂಇಎಸ್ ನಾಯಕರ ನಡೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ವಿರೋಧವನ್ನ ವ್ಯಕ್ತಪಡಿಸಿದೆ. ಬೆಳಗಾವಿಯ ಶಾಂತಿಯನ್ನು ಕದಡಲು ಮತ್ತು ಭಾಷಾ ವೈಷಮ್ಯದ ವಿಷಬೀಜ ಬಿತ್ತಲು ಈ ಭವನ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿರುವ ಕರವೇ, ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.

ಕಳೆದ ಐದು ದಶಕಗಳಿಂದ ಬೆಳಗಾವಿಯಲ್ಲಿ ಪದೇ ಪದೇ ಮಂಡಾಟಿಕೆ ಪ್ರದರ್ಶಿಸುತ್ತಿರುವ ಎಂಇಎಸ್ ನಾಯಕರು, ಈಗ ಮಹಾರಾಷ್ಟ್ರ ಸರ್ಕಾರವನ್ನು ಬಳಸಿಕೊಂಡು ‘ಮಹಾರಾಷ್ಟ್ರ ಗಡಿ ಭವನ’ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಹುತಾತ್ಮರ ಭವನ ನಿರ್ಮಿಸಲು ಯತ್ನಿಸಿದ್ದ ನಾಡದ್ರೋಹಿಗಳು, ಈಗ ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿರುವಾಗಲೇ ಇಂತಹ ಕುತಂತ್ರ ನಡೆಸುತ್ತಿದ್ದಾರೆ ಎಂದು ಕರವೇ ಕಿಡಿಕಾರಿದೆ. ಸಾಮಾನ್ಯ ರಾಜ್ಯ ಭವನಗಳಿಗೂ ಮತ್ತು ‘ಗಡಿ ಭವನ’ಕ್ಕೂ ವ್ಯತ್ಯಾಸವಿದ್ದು, ಇದು ಕೇವಲ ಗೊಂದಲ ಸೃಷ್ಟಿಸುವ ಪ್ರಯತ್ನವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಜಮೀನು ಅಥವಾ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಸಂಘಟನೆ ಮನವಿ ಮಾಡಿದೆ.
