ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಪುಂಡ ಸವಾರರಿಗೆ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ತ್ರಿಬಲ್ ರೈಡಿಂಗ್ ಹಾಗೂ ಪರವಾನಗಿ ಇಲ್ಲದೆ ರಸ್ತೆಗಿಳಿಯುವವರ ವಿರುದ್ಧ ಪೊಲೀಸರು ಇಂದು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಸ್ಥಳದಲ್ಲೇ ದಂಡ ವಿಧಿಸುವ ಮೂಲಕ ಇಳಕಲ್ ನಗರದ ಪೊಲೀಸರು ಸಂಚಾರ ನಿಯಮಗಳ ಪಾಠ ಮಾಡಿದ್ದಾರೆ.


ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಪ್ರಮುಖ ವೃತ್ತಗಳಲ್ಲಿ ಇಂದು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದರು. ಸಾರ್ವಜನಿಕರ ಜೀವ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಳಕಲ್ ನಗರ ಪೊಲೀಸರು ವಾಹನ ಸವಾರರ ತಪಾಸಣೆ ನಡೆಸಿದರು. ಮುಖ್ಯವಾಗಿ ಹೆಲ್ಮೆಟ್ ಧರಿಸದವರು, ಲೈಸನ್ಸ್ ಹಾಗೂ ಆರ್.ಸಿ ಇಲ್ಲದೆ ಓಡಾಡುವವರು ಮತ್ತು ತ್ರಿಬಲ್ ರೈಡಿಂಗ್ ಮಾಡುವವರನ್ನು ತಡೆದು ದಂಡದ ಬಿಸಿ ಮುಟ್ಟಿಸಿದರು.
ಇನ್ನು ಪೋಷಕರ ಗಮನಕ್ಕೆ ಬಾರದೆ ಬೈಕ್ ಏರಿ ರಸ್ತೆಗಿಳಿಯುವ ಅಪ್ರಾಪ್ತ ಬಾಲಕರ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. “ಸಂಚಾರ ನಿಯಮಗಳು ದಂಡ ವಿಧಿಸಲು ಮಾತ್ರವಲ್ಲ, ನಿಮ್ಮ ಪ್ರಾಣ ರಕ್ಷಣೆಗಾಗಿ ಇರುವುದು” ಎಂದು ಪೊಲೀಸರು ಸವಾರರಿಗೆ ತಿಳಿಹೇಳಿದರು. ನಿಯಮ ಉಲ್ಲಂಘನೆ ಮುಂದುವರಿಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
