ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಶಾರ್ಟ್ ಸರ್ಕ್ಯೂಟ್’ನಿಂದ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮನೆಯಲ್ಲಿದ್ದ ನಗದು, ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಸವದತ್ತಿ ಪಟ್ಟಣದ ಜಂಬಳೆನ್ನವರ ಓಣಿಯ ನಿವಾಸಿ ಫಕ್ಕೀರಪ್ಪ ಬೆಣಕಟ್ಟಿ ಎಂಬುವವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬುಧವಾರ ಸವದತ್ತಿ ಸಂತೆ ಇದ್ದ ಕಾರಣ ಕುಟುಂಬಸ್ಥರು ವ್ಯಾಪಾರಕ್ಕಾಗಿ ಮಾರುಕಟ್ಟೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ.
ಮನೆಯಲ್ಲಿದ್ದ ಬಟ್ಟೆ ಬರೆ, ದವಸ ಧಾನ್ಯಗಳು ಮಾತ್ರವಲ್ಲದೆ, ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ಸುಮಾರು 2.5 ಲಕ್ಷ ರೂಪಾಯಿ ನಗದು ಬೆಂಕಿಗೆ ಆಹುತಿಯಾಗಿದೆ. ಕುಟುಂಬಸ್ಥರ ಪ್ರಕಾರ ಅಂದಾಜು 10 ಲಕ್ಷ 80 ಸಾವಿರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಾಶವಾಗಿದೆ. ಬೀದಿಬದಿ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಈ ಬಡ ಕುಟುಂಬ, ಇಡೀ ಜೀವನದ ಸಂಪಾದನೆಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದೆ.
ಸ್ಥಳಕ್ಕೆ ಧಾವಿಸಿದ ಸವದತ್ತಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
