ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಶುಕ್ರವಾರ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಬೆಳಗಾವಿಯ ಧರ್ಮವೀರ ಛತ್ರಪತಿ ಸಂಭಾಜೀ ಮಹಾರಾಜರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.


ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂ ಧರ್ಮದ ಯುವಕ ದೀಪು ಚಂದ್ರ ದಾಸ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಂಡನೀಯ ಮತ್ತು ಅಮಾನವೀಯ ಕೃತ್ಯ ಎಂದು ಬೆಳಗಾವಿಯ ಧರ್ಮವೀರ ಛತ್ರಪತಿ ಸಂಭಾಜೀ ಮಹಾರಾಜರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟನಾಕಾರರು ಕಿಡಿಕಾರಿದರು.

ಇಂಥ ಘಟನೆಗಳು ಬಾಂಗ್ಲಾದೇಶದಲ್ಲಿ ಪದೇ ಪದೇ ನಡೆಯುತ್ತಿದ್ದು, ಹಿಂದೂ ಸಮುದಾಯದ ಜನರು ಭಯಭೀತಿಯಲ್ಲಿ ವಾಸಿಸುವಂತಾಗಿದೆ. ಅವರ ಜೀವ ಹಾಗೂ ಆಸ್ತಿ ರಕ್ಷಣೆಗೆ ಅಲ್ಲಿನ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕೆಲ ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ಮರುಕಳಿಸುತ್ತಲೇ ಇವೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ರಾಜತಾಂತ್ರಿಕ ಪ್ರತಿನಿಧಿಗಳು ಹಸ್ತಕ್ಷೇಪ ಮಾಡಬೇಕು. ಕೂಡಲೇ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಒಂದೆಡೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದ್ದು, ಭಾರತ ದೇಶದೊಳಗೆ ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶದ ಜನರು ದೇಶದ ನಾನಾ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಇಂತಹ ಅಕ್ರಮ ವಲಸಿಗರನ್ನು ತಕ್ಷಣ ಗುರುತಿಸಿ, ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.
ಸರಕಾರ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹಿಂದುತ್ವ ಪರ ಸಂಘಟನೆಗಳು ಉಗ್ರ ಹೋರಾಟ ನಡೆಸಲಿವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ಹಿಂದು ಸಂಘಟನೆ ಕೃಷ್ಣಾ ಭಟ್, ಶಿಲ್ಪಾ ಕೇಕರೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.
