ವಿಜಯಪುರ ನಗರ ಗೋಳಗುಮ್ಮಟ ಸಹಿತ ಹಲವು ಸ್ಮಾರಕಗಳಿಂದ ಪ್ರಖ್ಯಾತ. ಮಕ್ಕಳ ಸಾಹಿತಿಗಳ ತವರೂರು ಕೂಡ ಹೌದು. ಈಗ ವೃಕ್ಷೋತ್ಥಾನ್ ಹೆರಿಟೇಜ್ ರನ್ ನಿಂದಲೂ ಇಡೀ ದೇಶದ ಗಮನ ಸೆಳೆದಿದೆ. ಪರಿಸರ, ಆರೋಗ್ಯ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮದ ಕುರಿತು ಜಾಗೃತಿಗಾಗಿ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2025 ಯಶಸ್ವಿಯಾಗಿ ನಡೆಯಿತು. ನಡೆದಾಡುವ ದೇವರು, ಶತಮಾನದ ಸಂತ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಮರ್ಪಣೆಯಾಯಿತು. 25 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಈ ಕುರಿತು ಇಲ್ಲಿದೆ ಡಿಟೇಲ್ಸ್…


ವಿಜಯಪುರ ಜಿಲ್ಲೆಯನ್ನು ಶಾಶ್ವತ ಬರಗಾಲ ಪೀಡಿತ ಜಿಲ್ಲೆ ಎಂದು ಕರೆಯಲಾಗುತ್ತಿತ್ತು. ಆದ್ರೆ ಕಳೆದ ಒಂಭತ್ತು ವರ್ಷಗಳಿಂದ ಕೋಟಿ ವೃಕ್ಷ ಅಭಿಯಾನದಡಿ ವೃಕ್ಷವನ್ನು ಬೆಳೆಸಿ ಆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದೀಗ ಆರು ವರ್ಷಗಳಿಂದ ವೃಕ್ಷೋತ್ಥಾನ್ ರನ್ ಕೂಡ ಆಯೋಜಿಸಲಾಗುತ್ತದೆ. ಇಂದು ನಗರದಲ್ಲಿ ಹೆರಿಟೇಜ್ ರನ್ ನಡೆಸಲಾಯಿತು. ನಸುಕಿನ ಚುಮುಚುಮು ಚಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಮತ್ತು ಸಚಿವ ಈಶ್ವರ ಖಂಡ್ರೆ ಅವರು ಚಾಲನೆ ನೀಡಿದರು. ಈ ಓಟ ಆಯೋಜನೆಯಿಂದ ಜಿಲ್ಲೆಯ ಪ್ರಾಚೀನ ಸ್ಮಾರಕಗಳು, ದೇವಸ್ಥಾನಗಳಿಗೆ ದೇಶಾದ್ಯಂತ ಪ್ರಚಾರ ಸಿಗುತ್ತಿದೆ. ವಿದೇಶಿ ಪ್ರವಾಸಿಗರು ಹೆಚ್ಚೆಚ್ಚು ಬರಲು ಆಕರ್ಷಿತರಾಗುತ್ತಿದ್ದಾರೆ. ಪ್ರವಾಸೋದ್ಯಮದ ಜೊತೆ ವ್ಯಾಪಾರ ವಹಿವಾಟು, ಆರ್ಥಿಕ ಅಭಿವೃದ್ಧಿಗೂ ಪೂರಕ ವಾತಾವರಣ ಸೃಷ್ಠಿಯಾಗುತ್ತದೆ ಎನ್ನುವ ದೂರದೃಷ್ಟಿಯಿಂದ ಆಯೋಜನೆ ಮಾಡಲಾಗುತ್ತಿದೆ. ಇಂದು 5,10 ಹಾಗೂ 21 ಕಿಲೊಮೀಟರ್ ಮ್ಯಾರಥಾನ್ ಆಯೋಜಿಸಲಾಗಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಇನ್ನೂ ಇದೇ ವೇಳೆ ಕೋಟಿ ವೃಕ್ಷ ಅಭಿಯಾನದ ರೂವಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಇವರು ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಜೊತೆಗೆ 5 ಕಿ.ಮೀ ಓಟದಲ್ಲಿ ಹರ್ಷದಿಂದ ಹೆಜ್ಜೆ ಹಾಕಿ ಮತ್ತಷ್ಟು ಜೋಷ್ ಹೆಚ್ಚಿಸಿದರು.

ಇನ್ನೂ ಇದೆ ವೇಳೆ ಸ್ವಾಮೀಜಿಗಳು ಕೂಡಾ ಭಾಗವಹಿಸಿದ್ದು ವಿಶೇಷವಾಗಿತ್ತು. ಮೊದಲಿಗೆ ವಿಜಯಪುರದಲ್ಲಿ ಅರಣ್ಯವೇ 0.17 ಮಾತ್ರ ಇದ್ದಿತ್ತು. ಆದ್ರೆ ಇದೀಗ ಅರಣ್ಯ ನಿರ್ಮಾಣದ ಪಯಣ ನಿರಂತರ ಕಳೆದ 10 ವರ್ಷಗಳಲ್ಲಿ 1.5 ಕೋಟಿಗಿಂತ ಹೆಚ್ಚು ಗಿಡಗಳು ಇಂದು ಬಸವನಾಡಿನ ಶ್ವಾಸಕೋಶವಾಗಿ ಅರಳಿವೆ. ಅರಣ್ಯ ಸಚಿವರ ಆಗಮನ ಕಾರ್ಯಕ್ರಮಕ್ಕೆ ಸಂತಸ, ಚೈತನ್ಯ ಮತ್ತು ಹೊಸ ಉತ್ಸಾಹ ತುಂಬಿತ್ತು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಜನರು ಭಾಗವಹಿಸಿದ್ದರು. ಅದರಲ್ಲೂ ವಯಸ್ಸಾದವರು ಭಾಗವಹಿಸಿ ರನ್ ಗೆ ಮತ್ತಷ್ಟು ಮೆರುಗು ತಂದರು. ಇನ್ನೂ ಯುವಕ ಯುವತಿಯರಂತೂ ಬಹು ಉತ್ಸಾಹದಿಂದ ರನ್ ವಿಜಯಪುರ ರನ್ ಎನ್ನುತ್ತಾ ಓಡಿದರು. ಇನ್ನೂ ರನ್ ನಲ್ಲಿ ಭಾಗವಹಿಸಿದವರಿಗೆ ಹೈಡ್ರೆಷನ್ ಪಾಯಿಂಟ್ ನಲ್ಲಿ ಗ್ಲುಕೋಜ್, ಶೆಂಗಾ ಚಿಕ್ಕಿ, ಪೆಪರ್ ಮೆಂಟ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೇ ಮನರಂಜನೆಗಾಗಿ ಡೊಳ್ಳು, ಡಿಜೆ, ಕೇರಳದ ನೃತ್ಯ, ಕರಡಿ ಮಜಲು ಹಾಗೂ ಜುಂಬಾದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಡಿಜೆ ಸೌಂಡ್ ಗೆ ಯುವಕ ಯುವತಿಯರು ಸ್ಟೆಪ್ ಹಾಕಿದ ಬಳಿಕ ಮತ್ತೆ ಓಡಿದರು. ಭಾಗವಹಿಸಿದವರಿಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತ್ರವಿರುವ ಮೆಡಲ್ ವಿತರಿಸಲಾಯಿತು. ಇನ್ನೂ ವೇದಿಕೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಒಟ್ಟಾರೆ ವಿಜಯಪುರ ನಗರದಲ್ಲಿ ಶತಮಾನದ ಸಂತ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದೊಂದಿಗೆ ವಿಜಯಪುರ ಇತಿಹಾಸದಲ್ಲೇ ಅತಿದೊಡ್ಡ ಓಟದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಅಲ್ಲದೇ ವಿಜಯಪುರದ ಬೀದಿಗಳು ಇಂದು ಓಟಗಾರರ ನಗೆ, ಹರ್ಷದ ಹೊನಲುಗಳಿಂದ ಕಂಗೊಳಿಸಿದವು. ಪರಿಸರ ಸಂರಕ್ಷಣೆಗೆ ಪ್ರತಿ ಹೆಜ್ಜೆಯೂ ಶಪಥದಂತೆ ಭಾಸವಾಯಿತು.

