ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಳ್ಯಾಳ್ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ದುರಂತ ಸಂಭವಿಸಿದೆ. ಗ್ಯಾಸ್ ಸ್ಫೋಟದ ತೀವ್ರತೆಗೆ ಮನೆ ಗೋಡೆಗಳು ಕುಸಿದು, ಮನೆಯಲ್ಲಿ ದಂಪತಿಗೆ ಗಂಭೀರ ಗಾಯಗಳಾಗಿವೆ.
ಹಳ್ಯಾಳ್ ಗ್ರಾಮದ ಧನಪಾಲ ಕಾಂಬಳೆ ಹಾಗೂ ಅನಸೋಯಾ ಕಾಂಬಳೆ ದಂಪತಿ ಎಂದಿನಂತೆ ಬೆಳಿಗ್ಗೆ ಅಡುಗೆಗಾಗಿ ಹೆಚ್.ಪಿ. ಗ್ಯಾಸ್ ಸಿಲಿಂಡರ್ ಹಚ್ಚಲು ಹೋದ ಸಂದರ್ಭದಲ್ಲಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆಯ ಗೋಡೆ ಪೀಸ್ ಪೀಸ್ ಆಗಿ ಕುಸಿದಿದೆ.
ಘಟನೆಯ ಬಳಿಕ ಗಾಯಾಳುಗಳನ್ನು ತಕ್ಷಣ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇಬ್ಬರಿಗೂ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

