Vijaypura

ವಿಜಯಪುರದಿಂದ ಬೆಂಗಳೂರು ರೈಲು ಪ್ರಯಾಣದ ಅವಧಿಯಲ್ಲಿ ಮತ್ತಷ್ಟು ಕಡಿತ; ಸಚಿವ ಎಂ.ಬಿ.ಪಾಟೀಲ

Share

ಐತಿಹಾಸಿಕ ವಿಜಯಪುರ ಹಾಗೂ ರಾಜಧಾನಿ ಬೆಂಗಳೂರಿನ ನಡುವೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗದಲ್ಲಿ ರೈಲು ಸೇವೆ ನೀಡಲು ರೈಲ್ವೆ ಮಂಡಳಿ ಹೊಸ ರೈಲುಗಳನ್ನು ಮಂಜೂರು ಮಾಡಬೇಕಿದೆ. ಅದಕ್ಕಾಗಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ ಮತ್ತು ವಿ. ಸೋಮಣ್ಣ ಅವರಿಗೆ ಪತ್ರ ಬರೆಯಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು. ಖನಿಜ ಭವನದಲ್ಲಿ ಬುಧವಾರ ರಾಜ್ಯದ ವಿವಿಧ ವೆಚ್ಚ ಹಂಚಿಕೆಯ ರೈಲು ಯೋಜನೆಗಳ ಕುರಿತು ನೈಋತ್ಯ ರೈಲ್ವೆಯ ಉನ್ನತಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಾತನಾಡಿದ ಎಂ.ಬಿ. ಪಾಟೀಲ್‌, ಬೆಂಗಳೂರು-ವಿಜಯಪುರ ನಡುವೆ ರೈಲು ಪ್ರಯಾಣಕ್ಕೆ ಸದ್ಯ 15 ಗಂಟೆ ಬೇಕಾಗಲಿದೆ. ಅದನ್ನು 10 ಗಂಟೆಗೆ ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದರ ಭಾಗವಾಗಿ ಹುಬ್ಬಳ್ಳಿ ಮತ್ತು ಗದಗ ಬೈಪಾಸ್‌ ಮಾರ್ಗದಲ್ಲಿ ರೈಲು ಸೇವೆ ನೀಡಲು ಅಭ್ಯಂತರವಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ನಿಯಮಿತ ನಿಲುಗಡೆ ನೀಡಿ, ಅಲ್ಲಿಂದ ವಿಜಯಪುರಕ್ಕೆ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ರೈಲು ಸೇವೆ ಆರಂಭಿಸಿದರೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದೂ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಬೆಂಗಳೂರು-ವಿಜಯಪುರ ರೈಲು ಹುಬ್ಬಳ್ಳಿ ಮತ್ತು ಗದಗ ರೈಲು ನಿಲ್ದಾಣಗಳಲ್ಲಿ ಎಂಜಿನ್‌ ಬದಲಿಸಿ ಚಲಿಸಬೇಕಾಗಿದೆ. ಅದರಿಂದ ಪ್ರಯಾಣದ ಅವಧಿ ಹೆಚ್ಚಾಗುತ್ತಿದೆ. ಹೀಗಾಗಿ ಈ ಎರಡೂ ಬೈಪಾಸ್‌ಗಳ ಮೂಲಕ ರೈಲು ಓಡಿಸುವಂತಾದರೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ವಂದಾಲ ಮತ್ತು ಆಲಮಟ್ಟಿ ನಡುವೆ ಜೋಡಿ ಹಳಿ ಕಾಮಗಾರಿ ಬಾಕಿ ಉಳಿದಿದ್ದು, 2026ರ ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣವಾಗಲಿದೆ. ಈ ಭಾಗದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಅರ್ಧ ಕಿ.ಮೀ. ಉದ್ದದ ಬೃಹತ್‌ ಉಕ್ಕು ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಾರ್ಚ್‌ ವೇಳೆಗೆ ವಿದ್ಯುದ್ದೀಕರಣದ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ಬಳಿಕ ಹಾಲಿ ಸೇವೆ ನೀಡುತ್ತಿರುವ ರೈಲುಗಳ ವೇಗ ಹೆಚ್ಚಲಿದೆ. ಜತೆಗೆ ಹೊಸ ರೈಲುಗಳಿಗೂ ಬೇಡಿಕೆ ಸಲ್ಲಿಸಲಾಗುತ್ತದೆ. ಅದಕ್ಕಾಗಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Tags:

error: Content is protected !!