ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಕ್ರೌರ್ಯ, ಕೊಲೆ ಹಾಗೂ ದಬ್ಬಾಳಿಕೆಯನ್ನು ಖಂಡಿಸಿ ಶಿವಸೇನಾ ಕಾರ್ಯಕರ್ತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಬಾಂಗ್ಲಾದೇಶ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಜತೆಗೆ ಬಾಂಗ್ಲಾ ದೇಶದ ಧ್ವಜವನ್ನು ಸುಟ್ಟು ಅಸಮಧಾನ ತೋರಿದರು. ಬಾಂಗ್ಲಾ ದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಕಂಡ ಕಂಡಲ್ಲಿ ಹಿಂದೂಗಳನ್ನು ಕೊಲೆ ಮಾಡುವುದು, ಬಹಿರಂಗವಾಗಿಯೇ ಹಿಂದೂಗಳನ್ನು ನೇಣು ಹಾಕಿ ಅವರಿಗೆ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಅಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದರ ಮಧ್ಯೆ ಐಪಿಎಲ್ ಕೋಲ್ಕತ್ತಾ ತಂಡದ ಮಾಲೀಕ ಶಾರುಖ್‌ಖಾನ್ ಅವರು ಬಾಂಗ್ಲಾ ದೇಶದ ಕ್ರಿಕೆಟಿಗರನ್ನೇ ಹೆಚ್ಚು ಆಯ್ಕೆ ಮಾಡಿಕೊಂಡಿದ್ದಾರೆ. ಬಾಂಗ್ಲಾ ದೇಶದ ಕ್ರಿಕೇಟಿಗರು ಭಾರತಕ್ಕೆ ಐಪಿಎಲ್ ಆಡಲು ಬರಲು ನಾವು ಬಿಡುವುದಿಲ್ಲ. ಐಪಿಎಲ್ ಕ್ರಿಕೆಟ್‌ನಲ್ಲಿ ಬಾಂಗ್ಲಾ ಕ್ರಿಕೆಟಿಗರನ್ನು ಕೈಬಿಡಬೇಕು ಇಲ್ಲದೇ ಹೋದರೆ ಇದು ದೊಡ್ಡ ಹೋರಾಟಕ್ಕೆ ಕಾರಣವಾಗಲಿದೆ. ಬಾಂಗ್ಲಾ ದೇಶದ ಮುಸ್ಲಿಂರು ನಮ್ಮ ದೇಶದಲ್ಲಿದ್ದಾರೆ. ಅವರನ್ನು ಗುರುತಿಸಿ ಹೊರ ಹಾಕುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದಂತೆಯೇ ಇಲ್ಲೂ ಬಾಂಗ್ಲಾ ದೇಶದ ಮುಸ್ಲಿಂರ ಮೇಲೆ ದೌರ್ಜನ್ಯ ನಡೆಯುವ ಕಾಲ ಬಹಳ ದೂರ ಇಲ್ಲ. ಬಾಂಗ್ಲಾದಲ್ಲಿರುವ ಹಿಂದೂಗಳಿಗೆ ಕೇಂದ್ರ ಸರ್ಕಾರ ರಕ್ಷಣೆ ನೀಡುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಶಿವಸೇನಾ ಕಾರ್ಯಕರ್ತರು ಆಗ್ರಹಿಸಿದರು.
