ರಾಯಭಾಗ ತಾಲ್ಲೂಕಿನ ಕುಡಚಿ–ಜಮಖಂಡಿ ರಸ್ತೆಯಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾಲ ಶಿರಗೂರ ಗ್ರಾಮದ ಸಮೀಪ ಸಿಮೆಂಟ್ ತುಂಬಿದ ಲಾರಿ ತಿರುವಿನಲ್ಲಿ ಆಯತಪ್ಪಿ ಪಲ್ಟಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಡಚಿ ಕಡೆಯಿಂದ ಹಾರೂಗೇರಿ ಕಡೆಗೆ ಹೊರಟಿದ್ದ ಸಿಮೆಂಟ್ ಲಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಬಿ.ಬಿ. ಬಾವಿ ಸರ್ಕಾರಿ ಫ್ರೌಢ ಶಾಲೆ, ಹಾಲ ಶಿರಗೂರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳು ಲಾರಿಯ ಕೆಳಗೆ ಸಿಲುಕಿದ್ದಾರೆ. ಅಪಘಾತದಲ್ಲಿ ಅಮಿತ್ ಕಾಂಬಳೆ (11) ಎಂಬ 5ನೇ ತರಗತಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅದೇ ಕುಟುಂಬದ ಅಂಜಲಿ ಕಾಂಬಳೆ (10ನೇ ತರಗತಿ) ಹಾಗೂ ಅವಿನಾಶ ಕಾಂಬಳೆ (9ನೇ ತರಗತಿ) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಾರೂಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿ ಕೆಳಗೆ ಸಿಲುಕಿದ್ದವರನ್ನು ರಕ್ಷಣೆ ಮಾಡಿದರು. ಘಟನೆ ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
