ಕರ್ನಾಟಕದ ಜನಸಾಮಾನ್ಯರ ತೆರಿಗೆ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಓಲೈಕೆಗಾಗಿ ಕೇರಳ ಮೂಲದ ನಿವಾಸಿಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪಾ ಗಡಾದ ಗಂಭೀರವಾಗಿ ಆರೋಪಿಸಿದ್ದಾರೆ.

ಬೆಂಗಳೂರಿನ ಕೋಗಿಲೆ ಲೇಔಟ್‌ನಲ್ಲಿ ನೆಲೆಸಿರುವ ಕೇರಳ ಮೂಲದ ನಿವಾಸಿಗಳಿಗೆ ತಲಾ 11,20,000 ರೂಪಾಯಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಮುಂದಾಗಿದೆ. ಆದರೆ, ಕರ್ನಾಟಕದ ಸಾವಿರಾರು ರೈತರು ಮತ್ತು ಬಡವರು ಇಂದಿಗೂ ಮನೆಗಳಿಲ್ಲದೆ ಕಷ್ಟಪಡುತ್ತಿದ್ದಾರೆ. ವಸತಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡದ ಸರ್ಕಾರ, ಹೊರರಾಜ್ಯದವರನ್ನು ಓಲೈಸುತ್ತಿರುವುದು ದುರಂತ ಎಂದು ಅವರು ಕಿಡಿಕಾರಿದ್ದಾರೆ.
2019ರ ಪ್ರವಾಹದ ಸಮಯದಲ್ಲಿ ಅರಭಾವಿ ಕ್ಷೇತ್ರದ ಸುಮಾರು 960 ಸಂತ್ರಸ್ತರಿಗೆ ಮನೆಗಳನ್ನು ನೀಡಲು ಸರ್ಕಾರ ನಿರಾಕರಿಸಿತ್ತು. ಆಗ ನಾವು ಹೈಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡಬೇಕಾಯಿತು. ಅಂದು ಕನ್ನಡಿಗರಿಗೆ ಹಣ ನೀಡದ ಸರ್ಕಾರ, ಕೇರಳದ ವೈನಾಡಿನಲ್ಲಿ ಪ್ರವಾಹ ಬಂದಾಗ ತಲಾ 10 ಲಕ್ಷ ರೂಪಾಯಿಯಂತೆ 100 ಮನೆಗಳಿಗೆ ಹಣ ಬಿಡುಗಡೆ ಮಾಡಿತ್ತು” ಎಂದು ಅವರು ಹಳೆಯ ಘಟನೆಗಳನ್ನು ನೆನಪಿಸಿದರು. ರಾಜ್ಯದಲ್ಲಿ ವಿರೋಧ ಪಕ್ಷಗಳು ಕೇವಲ ಹೆಸರಿಗೆ ಮಾತ್ರ ಇವೆ. ಸರ್ಕಾರದ ಇಂತಹ ನಡೆಗಳ ವಿರುದ್ಧ ಗಂಭೀರ ಹೋರಾಟ ಮಾಡುವ ಬದಲು ಮಾಧ್ಯಮಗಳಲ್ಲಿ ಕೇವಲ ಹೇಳಿಕೆ ನೀಡುವುದಕ್ಕೆ ಸೀಮಿತವಾಗಿವೆ. ಕೇರಳದ ಚುನಾವಣೆ ಗಮನದಲ್ಲಿಟ್ಟುಕೊಂಡು ಮತದಾರರ ಓಲೈಕೆಗಾಗಿ ಕನ್ನಡಿಗರ ತೆರಿಗೆ ಹಣ ಲೂಟಿ ಮಾಡಲಾಗುತ್ತಿದೆ ಎಂದು ಅವರು ಆಪಾದಿಸಿದ್ದಾರೆ.
ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಜನರ ತೆರಿಗೆ ಹಣ ದುರುಪಯೋಗವಾಗುವುದನ್ನು ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಕಟ್ಟುನಿಟ್ಟಿನ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಭೀಮಪ್ಪಾ ಗಡಾದ ಎಚ್ಚರಿಸಿದ್ದಾರೆ.
