Belagavi

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ನಿರ್ದೇಶಕರಾಗಿ ಆನಂದ ಬಸವರಾಜ ಹಾವಣ್ಣವರ ಆಯ್ಕೆ..!

Share

ಬೆಳಗಾವಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ಆನಂದ ಬಸವರಾಜ ಹಾವಣ್ಣವರ ಅವರು ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ (KSBA) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಚುನಾವಣೆಯಲ್ಲಿ, ಆನಂದ ಹವಣ್ಣವರ ಅವರು ಮೊದಲ ಪ್ರಾಶಸ್ತ್ಯದ 21 ಮತಗಳ ಪೈಕಿ 19 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ದಾಖಲಿಸಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅವರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಈ ಚುನಾವಣೆಯಲ್ಲಿ ಬೆಳಗಾವಿ ಸೇರಿದಂತೆ ಮಂಡ್ಯ, ಶಿವಮೊಗ್ಗ, ದಾವಣಗೆರೆ, ರಾಯಚೂರು, ರಾಮನಗರ, ದಕ್ಷಿಣ ಕನ್ನಡ, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪದಾಧಿಕಾರಿಗಳು ಸಹ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಆನಂದ ಹಾವಣ್ಣವರ ಅವರು ಕಳೆದ ಎರಡು ವರ್ಷಗಳಿಂದ ಬೆಳಗಾವಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, 2019 ರಿಂದ 2022 ರವರೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ಆಯ್ಕೆಯಿಂದ ಬೆಳಗಾವಿ ಜಿಲ್ಲೆಯ ಬ್ಯಾಡ್ಮಿಂಟನ್ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಬಲ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಆನಂದ ಹಾವಣ್ಣವರ ಅವರ ಈ ಸಾಧನೆಯನ್ನು ಸ್ಮರಿಸಿ ಬೆಳಗಾವಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಅಶೋಕ ಪಾಟೀಲ, ಮಾಜಿ ನಗರಸೇವಕ ರಾಜಕುಮಾರ ಮುರ್ಕಿಭಾವಿ, ಸೋಶಿಯಲ್ ಕ್ಲಬ್ ಅಧ್ಯಕ್ಷ ಮುರುಗೇಶ ಡಫಳಾಪುರೆ, ಮಹಾದೇವ ಮಾಳಗಿ, ಜಿಲ್ಲಾ ಸಂಸ್ಥೆಯ ನಿರ್ದೇಶಕ ಅಭಯ ಹಾರದಿ, ಅಡ್ವೊಕೇಟ್ ಆರ್.ಜಿ. ಪಾಟೀಲ, ಬ್ಯಾಡ್ಮಿಂಟನ್ ತರಬೇತುದಾರ ಭೂಷಣ ಅಣವೇಕರ, ರಾಹುಲ್ ಕಾಕಡೆ, ವಿಜಯ ಹವಣ್ಣವರ, ಮಲ್ಲಿಕಾರ್ಜುನ ಚಚಡಿ ಸೇರಿದಂತೆ ಹಲವು ಗಣ್ಯರು ಹಾವಣ್ಣವರ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ ಮುಂದಿನ ದಿನಗಳಿಗೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ವೇದಾಂತ್ ಅಸುಂಡಿ ಸೇರಿದಂತೆ ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಹಾಗೂ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Tags:

error: Content is protected !!