ಪಂಚಮಸಾಲಿ ಸಮುದಾಯದ ಪ್ರಬಲ ಸಚಿವಾಕಾಂಕ್ಷಿಯಾಗಿರುವ ಶಾಸಕ ಕಾಶಪ್ಪನವರ್ ಮತ್ತು ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡುವಿನ ಟಾಕ್ ವಾರ್ ಮುಂದುವರೆದಿದೆ. ಚಳಿಗಾಲದ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಮಾತನಾಡಿದ ಶ್ರೀಗಳು, ಶಾಸಕರಿಗೆ ಸಚಿವ ಸ್ಥಾನ ನೀಡುವುದರಿಂದ ಸಮುದಾಯಕ್ಕೆ ಮೀಸಲಾತಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಶಾಸಕರು ಮತ್ತು ಸಚಿವರಿಂದ ಸಮಾಜ ಉದ್ದಾರವಾಗುವುದಿಲ್ಲ ಎಂದು ಹೇಳುವ ಮೂಲಕ ಕಾಶಪ್ಪನವರ್ ಅವರ ಸಚಿವ ಸ್ಥಾನದ ಆಕಾಂಕ್ಷೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು. ಸಮುದಾಯದ ಮೀಸಲಾತಿಗಾಗಿ ಶಾಸಕರು ಎಷ್ಟು ಹೋರಾಟ ಮಾಡಿದ್ದಾರೆ ಎಂಬುದು ಜನರಿಗೆ ತಿಳಿದಿದೆ ಎಂದು ಕೂಡ ಸ್ವಾಮೀಜಿ ಹೇಳಿದರು.
ಶ್ರೀಗಳ ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಶಾಸಕ ಕಾಶಪ್ಪನವರ್ ಅವರು ಏಕವಚನದಲ್ಲಿ ತಿರುಗೇಟು ನೀಡಿದರು. ಅವರು ಸ್ವಾಮೀಜಿಯನ್ನು “ಬಿಜೆಪಿ ಸೋ ಕಾಲ್ಡ್ ನಾಯಕರು” ಆ ಕಡೆಗೆ ಸೆಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು. ಬಹುಶಃ ಆ ಸ್ವಾಮಿಯನ್ನು ಚುನಾವಣೆಗೆ ನಿಲ್ಲಿಸಬಹುದು, ಅದಕ್ಕೆ ಅವರು ಖಾದಿ ಹಾಕಿಕೊಂಡು ತಯಾರಾಗಿದ್ದಾರೆ. “ನಾವು ಖಾದಿ ಹಾಕಿಕೊಂಡಿದ್ದೇವೆ ಅದರ ಮೇಲೆ ನಮ್ಮ ನಿರ್ಧಾರ ಆಗುತ್ತೆ… ಅವರಿಗೆ ನಮ್ಮ ಬೆಂಬಲ ಇದೆ ಅಂತಾ ಸ್ವಾಮಿಜಿ ಹೇಳ್ತಾನೆ” ಎಂದು ವಾಗ್ದಾಳಿ ನಡೆಸಿದ ಕಾಶಪ್ಪನವರ್, “ಹೈಕೊತ ಹೋಗ್ರಿ ನಮಗೇನಾಗುದದ” ಎಂದು ಕಿಡಿ ಕಾರಿದರು.

