ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ಧಾರವಾಡದಲ್ಲಿ ಮೆಕ್ಕೆಜೋಳ ಬೆಳೆಗಾರರು ದೊಡ್ಡಮಟ್ಟದಲ್ಲೇ ಹೋರಾಟ ನಡೆಸಿದ್ದರು. ಇದರ ಪರಿಣಾಮ ಮೆಕ್ಕೆಜೋಳ ಬೆಳೆಗಾರರಿಗೆ ಸರ್ಕಾರ ದಾರಿಯೊಂದನ್ನು ಹುಡುಕಿಕೊಟ್ಟಿದ್ದು, ಆ ಪ್ರಕಾರ ಸರ್ಕಾರವೇ ಮೆಕ್ಕೆಜೋಳ ಖರೀದಿ ಮಾಡುತ್ತಿದೆ. ಆದರೆ, ಇಲ್ಲೂ ಇದೀಗ ರೈತರಿಗೆ ಸಂಕಷ್ಟ ಎದುರಾಗಿದೆ…. ಏನದು ಸಂಕಷ್ಟ ಅಂತೀರಾ? ಇಲ್ಲಿದೆ ನೋಡಿ ಡೀಟೆಲ್ಸ್.

ಬೆಂಬಲ ಬೆಲೆಯಡಿ ಸರ್ಕಾರವೇ ಖರೀದಿ ಕೇಂದ್ರಗಳ ಮೂಲಕ ರೈತರು ಬೆಳೆದ ಮೆಕ್ಕೆಜೋಳ ಖರೀದಿ ಮಾಡುವಂತೆ ಆಗ್ರಹಿಸಿ ಧಾರವಾಡ, ನವಲಗುಂದ, ಕುಂದಗೋಳ ಸೇರಿದಂತೆ ಇತರ ಭಾಗದ ರೈತರು ಹೋರಾಟ ನಡೆಸಿದ್ದರು. ಇದರ ಪರಿಣಾಮ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಇರುವ ಕೆಎಂಎಫ್ ಘಟಕಗಳ ಮೂಲಕ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2400 ರೂಪಾಯಿ ದರ ನಿಗದಿ ಮಾಡಿ ಖರೀದಿಗೆ ಮುಂದಾಗಿದೆ. ಆದರೆ, ರಾಜ್ಯ ಸರ್ಕಾರ ಕೇವಲ 50 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಮಾತ್ರ ಖರೀದಿಸಲು ಮುಂದಾಗಿದೆ. ಇದಲ್ಲದೇ ಸಕ್ಕರೆ ಕಾರ್ಖಾನೆಗಳ ಮೂಲಕವೂ ಮೆಕ್ಕೆಜೋಳ ಖರೀದಿಸಲು ಸರ್ಕಾರ ಸೂಚನೆ ನೀಡಿದೆ. ಧಾರವಾಡದ ರಾಯಾಪುರದಲ್ಲಿರುವ ಕೆಎಂಎಫ್ ಘಟಕದಿಂದ ರೈತರು ಬೆಳೆದ ಮೆಕ್ಕೆಜೋಳ ಖರೀದಿ ಮಾಡಲಾಗುತ್ತಿದೆ. ಜಿಲ್ಲೆಯ ಅನೇಕ ಭಾಗದ ರೈತರು ಇಲ್ಲಿಗೆ ಬಂದು ತಮ್ಮ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಹಾಗೂ ಧಾರವಾಡ ಜಿಲ್ಲಾಡಳಿತ ನಿಗದಿಪಡಿಸಿದಂತೆ ಮೆಕ್ಕೆಜೋಳವನ್ನು ಇಲ್ಲಿ ಖರೀದಿ ಮಾಡಲಾಗುತ್ತಿಲ್ಲ. 25 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಆದೇಶವಿದ್ದರೂ ಇಲ್ಲಿ ಕೇವಲ 18-20 ಕ್ವಿಂಟಾಲ್ ಮಾತ್ರ ಮೆಕ್ಕೆಜೋಳ ಖರೀದಿ ಮಾಡಲಾಗುತ್ತಿದೆ. ಬಾಕಿ ಉಳಿದ ಮೆಕ್ಕೆಜೋಳವನ್ನು ರೈತರು ತೆಗೆದುಕೊಂಡು ಹೋಗಿ ಏನು ಮಾಡಬೇಕು. ಪ್ರತಿಯೊಬ್ಬ ರೈತನಿಂದ 25 ಕ್ವಿಂಟಾಲ್ ಮೆಕ್ಕೆಜೋಳವನ್ನು ಕೆಎಂಎಫ್ ಖರೀದಿ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಸರ್ಕಾರ ರಾಜ್ಯದಾದ್ಯಂತ 50 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ಮುಂದಾಗಿದೆ. ಒಬ್ಬ ರೈತನಿಂದ 25 ಕ್ವಿಂಟಾಲ್ ಮೆಕ್ಕೆಜೋಳ ಖರೀದಿ ಮಾಡಿದರೆ ಇನ್ನುಳಿದ ರೈತರಿಗೆ ಈ ಲಾಭ ಸಿಗುವುದಿಲ್ಲ ಎಂಬ ಕಾರಣವನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿದ್ದ ರೈತರಿಗೆ ಸರ್ಕಾರವೇನೋ ಈ ರೀತಿ ಕೆಎಂಎಫ್ ಹಾಗೂ ಸಕ್ಕರೆ ಕಾರ್ಖಾನೆ ಎಂದು ಹೇಳಿ ರೈತರಿಗೆ ಲಿಂಕ್ ಮಾಡಿ ಈ ಸಮಸ್ಯೆ ತಂದೊಡ್ಡಿದೆ. ಸರ್ಕಾರ ಹಾಗೇ ಬಿಟ್ಟಿದ್ದರೆ ನಾವು ಎಲ್ಲಿಯಾದರೂ ನಾವು ಬೆಳೆದ ಬೆಳೆ ಮಾರಾಟ ಮಾಡುತ್ತಿದ್ದೆವು ಎಂಬ ಅಸಹಾಯಕ ಮಾತುಗಳನ್ನು ರೈತರು ಹೇಳುತ್ತಿದ್ದಾರೆ.
ಪ್ರತಿ ರೈತನಿಂದ 25 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಜಿಲ್ಲಾಡಳಿತ ಸೂಚಿಸಿದ್ದು, ಆದರೆ, ಕೆಎಂಎಫ್ ಕೇವಲ 18-20 ಕ್ವಿಂಟಾಲ್ ಮಾತ್ರ ಖರೀದಿ ಮಾಡುತ್ತಿರುವುದರಿಂದ ಇದೀಗ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಈ ಕಡೆ ಗಮನಹರಿಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎನ್ನುವುದು ಮೆಕ್ಕೆಜೋಳ ಬೆಳೆಗಾರರ ಒತ್ತಾಯವಾಗಿದೆ.

