ಖಾನಾಪುರ ತಾಲೂಕಿನ ನಾಗುರ್ಡಾ ಗ್ರಾಮಕ್ಕೆ ದೃಷ್ಟಿದೋಷದಿಂದ ಬಳಲುತ್ತಿದ್ದ ಕಾಡುಕೋಣವೊಂದು ಕಾಡಿನಿಂದ ಅಲೆದಾಡುತ್ತಾ ಪ್ರವೇಶಿಸಿದ್ದು, ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಕಾಡುಕೋಣವನ್ನು ಕಂಡ ಕೂಡಲೇ ಜನರು ಗಾಬರಿಗೊಂಡರಾದರೂ, ಅದಕ್ಕೆ ಕಣ್ಣು ಕಾಣಿಸುತ್ತಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ರೇಂಜರ್ ಶ್ರೀಕಾಂತ್ ಪಾಟೀಲ್ ಹಾಗೂ ಭೀಮಘಡ ಅಭಯಾರಣ್ಯದ ರೇಂಜರ್ ನದಾಫ್ ನೇತೃತ್ವದ ತಂಡ, ಪರಿಸ್ಥಿತಿಯನ್ನು ಅವಲೋಕಿಸಿ ಕಾಡುಕೋಣವನ್ನು ಸುರಕ್ಷಿತವಾಗಿ ಮರಳಿ ಅರಣ್ಯದ ಆವಾಸಸ್ಥಾನಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಮಾಹಿತಿ ನೀಡಿದ ಅರಣ್ಯ ಅಧಿಕಾರಿ ಶ್ರೀಕಾಂತ್ ಪಾಟೀಲ್, “ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಡುಪ್ರಾಣಿಗಳಿಗೆ ಎಂಸಿಎಫ್ (MCF) ಎಂಬ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಪ್ರಾಣಿಗಳು ತಾತ್ಕಾಲಿಕವಾಗಿ ದೃಷ್ಟಿ ಕಳೆದುಕೊಳ್ಳುತ್ತವೆ. ಇದು ಎಂಟರಿಂದ ಹದಿನೈದು ದಿನಗಳಲ್ಲಿ ನೈಸರ್ಗಿಕವಾಗಿಯೇ ಗುಣಮುಖವಾಗುವುದರಿಂದ ಯಾವುದೇ ವಿಶೇಷ ಚಿಕಿತ್ಸೆಯ ಅಗತ್ಯವಿರುವುದಿಲ್ಲ,” ಎಂದು ತಿಳಿಸಿದರು. ಕಾಡುಕೋಣಕ್ಕೆ ಯಾವುದೇ ತೊಂದರೆಯಾಗದಂತೆ ಅರಣ್ಯ ಸಿಬ್ಬಂದಿ ಅದನ್ನು ಕಾಡಿನ ಸುರಕ್ಷಿತ ಪ್ರದೇಶಕ್ಕೆ ಓಡಿಸಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

