ಬಾಗಲಕೋಟೆ ಜಿಲ್ಲೆಯ ಖಜ್ಜಿಡೋಣಿ ಮತ್ತು ಕಲಾದಗಿ ಗ್ರಾಮಗಳ ನಡುವೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್’ವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್, ಟ್ರ್ಯಾಕ್ಟರ್ ಪಲ್ಟಿಯಾಗುವ ಮುನ್ನವೇ ಚಾಲಕ ಕೆಳಕ್ಕೆ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಘಟನೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾದ ರಭಸಕ್ಕೆ ಅದರಲ್ಲಿದ್ದ ಕಬ್ಬು ಸಂಪೂರ್ಣವಾಗಿ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಪಘಾತದ ಹಿನ್ನೆಲೆಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಕಿಲೋಮೀಟರ್’ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ಪರದಾಡುವಂತಾಯಿತು.ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕಲಾದಗಿ ಪೊಲೀಸರು, ಜೆಸಿಬಿ ಯಂತ್ರದ ಸಹಾಯದೊಂದಿಗೆ ರಸ್ತೆಯಲ್ಲಿದ್ದ ಕಬ್ಬನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ಘಟನೆಯು ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಸಂಚಾರ ವ್ಯವಸ್ಥೆ ಸುಗಮವಾಗಿದೆ.
