ಬೆಳಗಾವಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಒಟ್ಟು 31 ಕೃಷ್ಣಮೃಗಗಳು ಮೃತಪಟ್ಟಿದ್ದು, ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗದಿಂದಾಗಿರಬಹುದು ಎಂದು ಆತಂಕ ವ್ಯಕ್ತವಾಗಿದೆ.ಇದು ಕೊರೊನಾ ಮಾದರಿಯ ರೋಗ ಆಗಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಇಂದು ಬೆಳಗಾವಿಯ ತಮ್ಮ ಕುವೆಂಪು ನಗರದಲ್ಲಿ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿದ ಸಚಿವರು, ರಾಣಿ ಚನ್ನಮ್ಮ ಕಿರುಮೃಗಾಲಯದಲ್ಲಿ ಒಟ್ಟು 31 ಕೃಷ್ಣ ಮೃಗಗಳು ಸಾವನ್ನಪ್ಪಿವೆ. ಇದಕ್ಕೆ ಕಾರಣ ಏನು ಎಂದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಕೇಳಿದರು. ರಾಣಿ ಚನ್ನಮ್ಮ ಕಿರುಮೃಗಾಲಯದಲ್ಲಿ 31 ಕೃಷ್ಣಮೃಗಗಳು ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ ಎಂದ ಸಚಿವರು, ಕೃಷ್ಣಮೃಗಗಳ ರಕ್ಷಣೆಗೆ ಮತ್ತು ಈ ನಿಗೂಢ ಸಾವುಗಳಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತಕ್ಷಣವೇ ಸಮಗ್ರ ತನಿಖೆ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ಪ್ರಾಥಮಿಕ ವರದಿ ಪ್ರಕಾರ ಸೋಂಕು ಹರಡುವಿಕೆಯಿಂದ ಸಾವು ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸಿಬ್ಬಂದಿಯ ನಿರ್ಲಕ್ಷ್ಯ ಸಂಬಂಧಿಸಿದಂತೆ ಬಂದಿರುವ ಆರೋಪಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.31 ಕೃಷ್ಣಮೃಗಗಳು ಸಾವನ್ನಪ್ಪಿರುವ ಪ್ರಕರಣ ಕುರಿತು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಉಳಿದಿರುವ ಕೃಷ್ಣಮೃಗಗಳ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು ಅರಣ್ಯ ಅಧಿಕಾರಿಗಳು ಈಗಾಗಲೇ ಸಾವಿನ ಸ್ಥಳಕ್ಕೆ ಭೇಟಿ ನೀಡಿದ್ದು, ವರದಿ ಬರಬೇಕಿದೆ. ರೋಗ ಬಂದಿರಬಹುದು ಎಂಬ ಆತಂಕ ಇದೆ. ಇಂದು ಬೆಂಗಳೂರಿನ ಬನ್ನೇರುಘಟ್ಟದಿಂದ ನುರಿತ ವೈದ್ಯರು ಬಂದಿದ್ದಾರೆ. ವೈದ್ಯರು ವರದಿ ನೀಡಿದ ಬಳಿಕ ಸರ್ಕಾರ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ”. ಸದ್ಯ ಒಂದೇ ಕಡೆ ಮಾತ್ರ ಈ ಸಾವುಗಳು ಸಂಭವಿಸಿವೆ. ವರದಿ ಬಂದ ಬಳಿಕ ಜಿಲ್ಲಾಡಳಿತ ಮತ್ತು ಇಲಾಖೆ ವತಿಯಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ಮೊನ್ನೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದೊಂದು ಹೊಸ ರೋಗ ಆಗಿದ್ದು, ಅದನ್ನು ಕಂಡುಹಿಡಿಯಲು ಕಷ್ಟವಾಗಬಹುದು” ಎಂದು ತಿಳಿಸಿದರು. ಅರಣ್ಯ ಇಲಾಖೆ ನಿಗಮದ ಅಧ್ಯಕ್ಷರೊಂದಿಗೆ ಕೃಷ್ಣಮೃಗಗಳ ಅಕಾಲಿಕ ಮರಣದ ಕುರಿತು ಚರ್ಚೆ ನಡೆಸಿರುವುದಾಗಿ ಅವರು ತಿಳಿಸಿದರು. ಅಧ್ಯಕ್ಷರು ಬಂದ ಮೇಲೆ ಸಂಜೆ ಮೃಗಾಲಯಕ್ಕೆ ಭೇಟಿ ನೀಡುವುದಾಗಿ ಸಚಿವ ಸತೀಶ್ ಜಾರಕಿಹೊಳಿಹೇಳಿದರು.
ಈ ವೇಳೆ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಡಿಎಪ್‌ಓ, ಆರ್‌ಎಪ್‌ಓ ಹಾಗೂ ಇತರ ಅಧಿಕಾರಿಗಳು ಇದ್ದರು.

