





ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದ್ದು, ಕಾರ್ಖಾನೆಗೆ ನುಗ್ಗಿದ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ಕಬ್ಬು ತುಂಬಿದ ಸುಮಾರು 30ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಹಾಗೂ 5 ಬೈಕ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಈ ಘಟನೆಯಲ್ಲಿ ಕರ್ತವ್ಯ ನಿರತರಾಗಿದ್ದ ಬಾಗಲಕೋಟೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ ಅವರ ಕಾಲಿಗೆ ಕಲ್ಲು ಬಿದ್ದು ಗಂಭೀರ ಗಾಯಗಳಾಗಿದ್ದು, ಅವರ ಎಡಗಾಲಿನ ಮೂಳೆ ಮುರಿತವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.ಸಮೀರವಾಡಿ ಗೋಧಾವರಿ ಸಕ್ಕರೆ ಕಾರ್ಖಾನೆ ಮುಂಭಾಗದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರು. ಈ ಹೋರಾಟ ಕೈಮೀರಿ, ಕಾರ್ಖಾನೆ ಒಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು ಮತ್ತು ಒಳಗೆ ಇದ್ದ ಕಾರ್ಮಿಕರು/ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿತು. ಆರಂಭದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆಯಲು ಯತ್ನಿಸಿದರೂ, ಕಲ್ಲು ತೂರಾಟ ಆರಂಭವಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕಾರ್ಖಾನೆ ಆವರಣದಲ್ಲಿದ್ದ ನೂರಾರು ಟ್ರ್ಯಾಕ್ಟರ್‌ಗಳ ಪೈಕಿ ಕನಿಷ್ಠ 30 ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ, 5 ಬೈಕ್‌ಗಳು ಮತ್ತು ಜಿಪಿಎಸ್ ರೂಂನ ಗಾಜುಗಳು ಪುಡಿ ಪುಡಿಯಾಗಿವೆ.ಘಟನೆಯಲ್ಲಿ ಕಲ್ಲು ತೂರಾಟದಿಂದ ಎ.ಎಸ್.ಪಿ. ಮಹಾಂತೇಶ್ವರ ಜಿದ್ದಿ ಅವರ ಕಾಲಿಗೆ ಗಂಭೀರ ಪೆಟ್ಟಾಗಿ, ಮೂಳೆ ಮುರಿತವಾಗಿದೆ.
ಮುಂಬೈ ಮೂಲದ ಸಮೀರ ಸೋಮಯ್ಯ ಮಾಲೀಕತ್ವದ ಈ ಕಾರ್ಖಾನೆಯು ಅಖಂಡ ವಿಜಯಪುರ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆಯಾಗಿದ್ದು, 1972 ರಲ್ಲಿ ಕಬ್ಬು ನುರಿಸುವಿಕೆ ಪ್ರಾರಂಭಿಸಿತು ಮತ್ತು 20 ಸಾವಿರ ಟನ್ ನುರಿಸುವ ಸಾಮರ್ಥ್ಯ ಹೊಂದಿದೆ. ಮಾಲೀಕರು ರೈತರ ಬಿಲ್ಲುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಿದ್ದರು ಮತ್ತು ಒಪ್ಪಿಕೊಂಡಷ್ಟು ಹಣವನ್ನು ನೀಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಈ ವರ್ಷ ಕರ್ನಾಟಕ ರಾಜ್ಯದ 800 ವಿದ್ಯಾರ್ಥಿಗಳಿಗೆ, ಅದರಲ್ಲೂ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಪಿಯುಸಿಯಿಂದ ಯಾವುದೇ ಡಿಗ್ರಿ ಓದುವವರೆಗೂ ಸ್ಕಾಲರ್‌ಶಿಪ್ ನೀಡಿ, ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಿದೆ.
ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತಕ್ಷಣವೇ ಪರಿಸ್ಥಿತಿ ನಿಯಂತ್ರಿಸಲು ಮೂರು ತಾಲ್ಲೂಕುಗಳಲ್ಲಿ, ಮೂರು ದಿನಗಳ ಕಾಲ ನಿಷೇಧಾಜ್ಞೆಯನ್ನು ಜಾರಿ ಮಾಡಿದೆ. ಈ ಕ್ಷಣದಿಂದ ದಿನಾಂಕ 16 ರ ಬೆಳಿಗ್ಗೆ 8 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕೃತ್ಯವನ್ನು ರೈತರ ಸೋಗಿನಲ್ಲಿ ಬಂದ ಕಿಡಿಗೇಡಿಗಳು ನಡೆಸಿದ್ದಾರೆ ಎಂದು ಶಂಕಿಸಿದ್ದಾರೆ.
“ಇದು ಮೇಲ್ನೋಟಕ್ಕೆ ಪೂರ್ವಯೋಜಿತ ಕೃತ್ಯ ಎಂದು ಅನಿಸುತ್ತದೆ. ಪೆಟ್ರೋಲ್ ತೆಗೆದುಕೊಂಡು ಬಂದು ಸುರಿದು ಬೆಂಕಿ ಹಚ್ಚಿರುವುದು ತಿಳಿದು ಬಂದಿದೆ. ಬೆಂಕಿ ಹಚ್ಚಿದವರು ರೈತರಲ್ಲ ಎಂಬ ಮಾಹಿತಿ ಇದೆ. 15 ರಿಂದ 20 ಜನರ ಮೇಲೆ ಸಂಶಯವಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಯಾರೇ ಆಗಿದ್ದರೂ ಅಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ಗಾಯಗೊಂಡ ಎ.ಎಸ್.ಪಿ. ಮಹಾಂತೇಶ್ವರ ಜಿದ್ದಿ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು,” ಎಂದು ಎಡಿಜಿಪಿ ಹಿತೇಂದ್ರ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಎಸ್.ಪಿ. ಸಿದ್ಧಾರ್ಥ ಗೋಯಲ್ ಮತ್ತು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಠೋರ ಅವರು ಎಡಿಜಿಪಿ ಅವರಿಗೆ ಸಾಥ್ ನೀಡಿದರು.

