
ಖಾನಾಪುರ ತಾಲೂಕಿನ ಲೊಂಡಾದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಬೆಳಿಗ್ಗೆ ಮಹಿಳೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಿತು. ಬಾಬುರಾವ್ ದೇಸಾಯಿ ಅವರು ತಮ್ಮ ಧರ್ಮಪತ್ನಿಯೊಂದಿಗೆ ವಿಧಿಪೂರ್ವಕವಾಗಿ ಶ್ರೀ ಮಹಾಲಕ್ಷ್ಮಿ ದೇವಿಯ ಪೂಜೆಯನ್ನು ನೆರವೇರಿಸಿದರು. ನಂತರ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯು ಬಾಬುರಾವ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಲೊಂಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೀಲಕಂಠ ಉಸಪ್ಕರ್, ಖಾನಾಪುರ ವಲಯ ಯೋಜನಾಧಿಕಾರಿ ಗಣಪತಿ ನಾಯ್ಕ, ಸಾಮೂಹಿಕ ಪೂಜಾ ಸಮಿತಿ ಅಧ್ಯಕ್ಷೆ ವಿದ್ಯಾ ಭೂತಕಿ, ಸಿಸ್ಟರ್ ಜೆಸಿಂತಾ, ಸಚಿನ್ ಪಿಂಟೋ, ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಚಿತ್ತಳೆ ಹಾಗೂ ಪತ್ರಕರ್ತ ವಸಂತ ಕಾಳಗೆ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಗೆ ಆಗಮಿಸಿದ ಎಲ್ಲ ಅತಿಥಿಗಳನ್ನು ಶಾಲು, ಪುಷ್ಪಗುಚ್ಛ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಭವ್ಯ ಕಾರ್ಯಕ್ರಮವು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹೆಗ್ಗಡೆ ಅವರ ಕೃಪಾಶೀರ್ವಾದಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.ಗಣಪತಿ ನಾಯ್ಕ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಉಪಸ್ಥಿತರಿದ್ದ ಸಂಘದ ಮಹಿಳೆಯರಿಗೆ ಯೋಜನೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಸವಿತಾ ಅವರು ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಭಾರತ್ ಹಂಡಿ, ಸಲೀಂ ಪಟೇಲ್, ಸವಿತಾ ಸಾವಂತ್, ಜ್ಯೋತಿ ಪಾಳೇಕರ್ ಮತ್ತು ಸಂಧ್ಯಾ ಹಂಡಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು. ಸವಿತಾ ಅವರು ವಂದನಾರ್ಪಣೆ ಮಾಡಿದರು.

