Belagavi

ಹದಗೆಟ್ಟು ಹೋದ ಬೇಕವಾಡ-ಇಟಗಿ ಕ್ರಾಸ್ ರಸ್ತೆ ಸಂಪೂರ್ಣ ಹಾಳು

Share

ಹದಗೆಟ್ಟು ಹೋದ ಬೇಕವಾಡ-ಇಟಗಿ ಕ್ರಾಸ್ ರಸ್ತೆ ಸಂಪೂರ್ಣ ಹಾಳುಲೋಕೋಪಯೋಗಿ ಇಲಾಖೆ ವಿರುದ್ಧ ರೈತ ಮುಖಂಡನ ಆಕ್ರೋಶ! ಬೇಕವಾಡ-ಇಟಗಿ ಕ್ರಾಸ್ ರಸ್ತೆ ಸಂಪೂರ್ಣ ಹಾಳು ಫೋನ್‌ನಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ

ಖಾನಾಪುರ ತಾಲೂಕಿನ ಪ್ರಮುಖ ರಸ್ತೆಯಾದ ಬೇಕವಾಡದಿಂದ ಇಟಗಿ ಕ್ರಾಸ್ ವರೆಗಿನ ಮಾರ್ಗ ಸಂಪೂರ್ಣವಾಗಿ ಹಾಳಾಗಿದ್ದರೂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ರೈತ ಮುಖಂಡ ಬಸನಗೌಡ ಪಾಟೀಲ್ ಅವರು ಪಿಡಬ್ಲ್ಯೂಡಿ ಅಭಿಯಂತರ ಗಸ್ತಿ ಅವರಿಗೆ ಫೋನ್‌ನಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಖಾನಾಪುರ ತಾಲೂಕಿನಾದ್ಯಂತ ರಸ್ತೆಗಳು ಹದಗೆಟ್ಟಿದ್ದು, ವಿಶೇಷವಾಗಿ ಕಬ್ಬು ಸಾಗಿಸುವ ರೈತರಿಗೆ ತೀವ್ರ ತೊಂದರೆಯಾಗಿದೆ. “ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ತೆಗ್ಗು-ಗುಂಡಿಗಳ ಸಾಮ್ರಾಜ್ಯದಲ್ಲಿ ಪಲ್ಟಿಯಾಗುತ್ತಿವೆ. ರೈತರು ತಮ್ಮ ಮನೆಗಳ ಹಂಚಿನ ತುಣುಕುಗಳನ್ನು ರಸ್ತೆಯ ಗುಂಡಿ ಮುಚ್ಚಲು ಉಪಯೋಗಿಸುವ ಪರಿಸ್ಥಿತಿ ಬಂದಿದೆ. ಇಂತಹಾ ಸ್ಥಿತಿಯಲ್ಲಿ ನಿಮ್ಮ ಇಲಾಖೆಯ ಭೂಪಟದಲ್ಲಿ ಖಾನಾಪುರ ತಾಲೂಕು ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ,” ಎಂದು ಬಸನಗೌಡ ಪಾಟೀಲ್ ಅವರು ಗಸ್ತಿ ಅವರನ್ನು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.ರೈತ ಮುಖಂಡರ ಪ್ರಶ್ನೆಗಳಿಗೆ ಅಭಿಯಂತ ಗಸ್ತಿ ಅವರು “ನೋಡುತ್ತೇವೆ, ಮಾಡುತ್ತೇವೆ” ಎಂಬ ಹಾರೈಕೆ ಉತ್ತರಗಳನ್ನು ನೀಡಿ ಜಾರಿಕೊಳ್ಳಲು ಯತ್ನಿಸಿದ್ದಾರೆ. ಪಕ್ಕದ ತಾಲೂಕುಗಳ ರಸ್ತೆಗಳು ಉತ್ತಮವಾಗಿರುವ ಬಗ್ಗೆ ಪಾಟೀಲ್ ಅವರು ಪ್ರಸ್ತಾಪಿಸಿದಾಗ, ಗಸ್ತಿ ಅವರು “ಅಲ್ಲಿ ರೂಲಿಂಗ್ ಪಾರ್ಟಿಯವರು ಇದ್ದಾರೆ” ಎಂದು ಉತ್ತರಿಸಿದ್ದು, ಇದು ರೈತ ಮುಖಂಡರ ರೊಚ್ಚಿಗೆ ಮತ್ತಷ್ಟು ಕಾರಣವಾಗಿದೆ. ಒಟ್ಟಿನಲ್ಲಿ, ಗಸ್ತಿ ಅವರು ಸೂಕ್ತ ಉತ್ತರ ನೀಡದೆ ಕಥೆ ಹೇಳಿ ಜಾರಿಕೊಂಡಿದ್ದಾರೆ.ರಸ್ತೆಗಳ ದುಃಸ್ಥಿತಿಯ ಬಗ್ಗೆ ಬಸನಗೌಡ ಪಾಟೀಲ್ ಅವರು ಶಾಸಕ ವಿಠ್ಠಲ ಹಲಗೇಕರ ಅವರಿಗೂ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ರಸ್ತೆ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಾಗ, ಶಾಸಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ತೆಗ್ಗು-ಗುಂಡಿಗಳಿಂದ ಕೂಡಿದ ಖಾನಾಪುರ ತಾಲೂಕಿನ ರಸ್ತೆಗಳು ರೈತರು, ಪ್ರವಾಸಿಗರು ಮತ್ತು ಜನಸಾಮಾನ್ಯರಿಗೆ ತೀವ್ರ ಅನಾನುಕೂಲ ಉಂಟುಮಾಡುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ‘ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು’ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

Tags:

error: Content is protected !!