ಅನಧಿಕೃತ ಕೋಚಿಂಗ್ ಸೆಂಟರ್ನಲ್ಲಿ 8-10 ಮಕ್ಕಳಿಗೆ ಫುಡ್ ಪಾಯಿಸನ್
ಬಿಇಓ ಭೇಟಿ, ಸೆಂಟರ್ ಬಂದ್ಗೆ ನೋಟಿಸ್!
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ಸೇಂಟರ್
ರಾತ್ರೋರಾತ್ರಿ ಮಕ್ಕಳು ಆಸ್ಪತ್ರೆಗೆ ದಾಖಲು
ಜಮಖಂಡಿ ನಗರದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ‘ಎಕ್ಸಲೆಂಟ್ ಕೋಚಿಂಗ್ ಸೆಂಟರ್’ನಲ್ಲಿ 8 ರಿಂದ 10 ಮಕ್ಕಳಿಗೆ ಫುಡ್ ಪಾಯಿಸನ್ ಆದ ಘಟನೆ ನಡೆದಿದ್ದು, ಮಕ್ಕಳನ್ನು ರಾತ್ರೋರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಫುಡ್ ಪಾಯಿಸನ್ನಿಂದ ಅಸ್ವಸ್ಥಗೊಂಡ ಮಕ್ಕಳು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಇಂದು (ಮಂಗಳವಾರ, ನವೆಂಬರ್ 18, 2025) ಬೆಳಗ್ಗೆಯೇ ಜಮಖಂಡಿಯ ಬಿಇಓ ಬಸನ್ನವರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಕುರಿತು ವಿಚಾರಿಸಿದರು. ಈ ‘ಎಕ್ಸಲೆಂಟ್ ಕೋಚಿಂಗ್ ಸೆಂಟರ್’ ಅನಧಿಕೃತವಾಗಿ ನಡೆಸಲಾಗುತ್ತಿತ್ತು. ಶಿಕ್ಷಣ ಇಲಾಖೆಯ ಯಾವುದೇ ಅನುಮತಿಯಿಲ್ಲದೆ, ಜಮಖಂಡಿ ತಾಲ್ಲೂಕಿನ ಬೇರೆ ಬೇರೆ ಶಾಲೆಗಳ ಮಕ್ಕಳನ್ನು ಇಲ್ಲಿ ವಸತಿ ಸಹಿತ ಇರಿಸಿಕೊಳ್ಳಲಾಗಿತ್ತು. ಇದು ಮಕ್ಕಳ ಜೀವದ ಜೊತೆ ಚೆಲ್ಲಾಟ ಎಂದು ಆಕ್ರೋಶ ವ್ಯಕ್ತವಾಗಿದೆ. ತಕ್ಷಣವೇ ಎಚ್ಚೆತ್ತ ಬಿಇಓ ಬಸನ್ನವರ್ ಅವರು, ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಅನ್ನು ಬಂದ್ ಮಾಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಜಮಖಂಡಿ ನಗರದಲ್ಲಿ ಇತ್ತೀಚೆಗೆ ಅನಧಿಕೃತ ಕೋಚಿಂಗ್ ಸೆಂಟರ್ಗಳ ಹಾವಳಿ ಹೆಚ್ಚಿದೆ. ಶಿಕ್ಷಣ ಇಲಾಖೆಯ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಈ ಎಲ್ಲಾ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಇಓ ಮುಂದಾಗಿದ್ದಾರೆ. ಮಕ್ಕಳ ದಾಖಲಾತಿ ಮತ್ತು ಸುರಕ್ಷತೆಯ ಮಾಹಿತಿ ನೀಡದ ಈ ಎಲ್ಲಾ ಅನಧಿಕೃತ ಕೋಚಿಂಗ್ ಸೆಂಟರ್ಗಳನ್ನು ತಕ್ಷಣವೇ ಮುಚ್ಚುವಂತೆ ಬಿಇಓ ಅವರು ಕಟ್ಟುನಿಟ್ಟಿನ ನೋಟಿಸ್ ನೀಡಿದ್ದಾರೆ.
ಈ ಘಟನೆಯು ಅನಧಿಕೃತ ಕೇಂದ್ರಗಳ ಸುರಕ್ಷತಾ ಲೋಪಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

