ವಿಜಯಪುರದ ಭೀಮಾತೀರದ ನೆಟೊರಿಯಸ್ ಗ್ಯಾಂಗ್ ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಶಾರ್ಪ್‌ಶೂಟರ್ ಧರ್ಮರಾಜ್ ಚಡಚಣ ಹೆಸರಿನಲ್ಲಿ ಹುಟ್ಟಿಕೊಂಡಿದ್ದ ಪ್ರಸಿದ್ಧ DMC ಗ್ಯಾಂಗ್ ನಲ್ಲಿ ಈಗ ಭಿನ್ನಾಭಿಪ್ರಾಯ ಮೂಡಿದೆ. ಗ್ಯಾಂಗ್ ಲೀಡರ್ ಮಡುಸ್ವಾಮಿ ಹಿರೇಮಠ ವಿರುದ್ಧವೇ ಈಗ ಧರ್ಮರಾಜ್ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್
ವಿಜಯಪುರ ಜಿಲ್ಲೆಯ ಭೀಮಾತೀರ ಮತ್ತೆ ಮುನ್ನಲೆಗೆ ಬಂದಿದೆ. ಭೀಮಾತೀರದ ನೆಟೊರಿಯಸ್ ಹಂತಕ ಧರ್ಮರಾಜ್ ಚಡಚಣ ನಕಲಿ ಎನ್‌ಕೌಂಟರ್‌ನಲ್ಲಿ ಸತ್ತ ಬಳಿಕ ಆತನ ಹೆಸರಿನಲ್ಲಿ ಹುಟ್ಟಿಕೊಂಡ ಈ ಗ್ಯಾಂಗ್ ಇದೀಗ ಬಿನ್ನಾಬಿಪ್ರಾಯದ ಸುಳಿಯಲ್ಲಿ ಸಿಲುಕಿದೆ. ಇದೀಗ ಧರ್ಮರಾಜ್ ತಾಯಿ ವಿಮಲಾಬಾಯಿ ಚಡಚಣ ಅವರೇ ಧರ್ಮರಾಜ ಆಪ್ತ ಮಡುಸ್ವಾಮಿಯ ವಿರುದ್ಧ ಆರೋಪ ಮಾಡಿದ್ದು ಈ ಬೆಳವಣಿಗೆಗೆ ಸಾಕ್ಷಿಯಾಗಿದೆ. 2020 ನವೆಂಬರ್ 2, ರಂದು ಭೀಮಾತೀರದ ಮಹಾದೇವ ಸಾಹುಕಾರ್ ಬೈರಗೊಂಡ ಮೇಲೆ ಮಡಿಸ್ವಾಮಿ ನೇತೃತ್ವದಲ್ಲಿ ನಡೆದ ದಾಳಿ ಜಿಲ್ಲೆಯನ್ನೇ ನಡುಗಿಸಿತ್ತು. 30 ಕ್ಕೂ ಹೆಚ್ಚು ಹುಡುಗರನ್ನು ಸೇರಿಸಿಕೊಂಡು ಭಯಾನಕ ಅಟ್ಯಾಕ್ ನಡೆಸಿತ್ತು. DMC ಗ್ಯಾಂಗ್, ಈ ಗ್ಯಾಂಗ್‌ನ್ನು ಮುನ್ನಡೆಸುತ್ತಿದ್ದವರು ಧರ್ಮರಾಜ್‌ನ ಆಪ್ತ ಮಡುಸ್ವಾಮಿ ಹಿರೇಮಠ ಎಂಬುದು ವಿಶೇಷ. ಈಗ ಧರ್ಮರಾಜ ಚಡಚಣ ತಾಯಿ ವಿಮಲಾಬಾಯಿ ಮಡುಸ್ವಾಮಿ ಈಗ ಬದಲಾಗಿದ್ದಾನೆ, ನಮ್ಮ ವಿರುದ್ಧವೇ ದೂರು ಕೊಟ್ಟಿದ್ದಾನೆ. ನಮ್ಮ ಮಗನ ಹೆಸರಿನಲ್ಲಿ ಹಪ್ತಾ, ಸುಲಿಗೆ ಮಾಡ್ತಾನೆ ಎಂದು ಆರೋಪಿಸಿದ್ದಾರೆ.
ಇನ್ನೂ ವಿಮಲಾಬಾಯಿ ತನ್ನ ಮಗನ ಆಪ್ತನಾಗಿದ್ದ ಮಡುಸ್ವಾಮಿ ವಿರುದ್ಧ ಬೆದರಿಕೆ, ಹಪ್ತಾ ವಸೂಲಿ, ಸುಲಿಗೆ ಆರೋಪಿಸಿದ್ದಾರೆ. ಇನ್ನೂ ಧರ್ಮರಾಜ ಚಡಚಣ 2017 ಅಕ್ಟೋಬರ್ 30 ರಂದು ನಕಲಿ ಎನ್‌ಕೌಂಟರ್ ನಲ್ಲಿ ಹತನಾಗಿದ್ದ, ಅದೇ ದಿವಸ ಧರ್ಮರಾಜ ಸಹೋದರ ಗಂಗಾಧರ ನಾಪತ್ತೆಯಾಗಿದ್ದ. ಆತನ ಶವವೂ ಸಿಕ್ಕಿರಲಿಲ್ಲಾ. ಭೀಮಾತೀರದ ಮಹಾದೇವ ಸಾಹುಕಾರ್ ಬೈರಗೊಂಡ ಇದಕ್ಕೆಲ್ಲಾ ಸೂತ್ರಧಾರರೆಂದು ಸಿಐಡಿ ತನಿಖೆ ನಡೆದು ಇದೀಗ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಸದ್ಯ ಧರ್ಮರಾಜ ತಾಯಿ ವಿಮಲಾಬಾಯಿ ಚಡಚಣ ಆರೋಪಿಸಿರುವ ಆರೋಪಗಳು ವಿಜಯಪುರದ ಪಾತಕ ಲೋಕದಲ್ಲಿ ಮತ್ತೊಂದು ಚರ್ಚೆಯ ವಿಷಯವಾಗಿದೆ.
ಒಟ್ಟಾರೆ ಒಮ್ಮೆ ಶಾರ್ಪ್‌ಶೂಟರ್ ಧರ್ಮರಾಜ್ ಹೆಸರಿನಲ್ಲಿ ಭೀಮಾತೀರದಲ್ಲಿ ಭೀತಿ ಮೂಡಿಸಿದ್ದ DMC ಗ್ಯಾಂಗ್ ಈಗ ಆತ್ಮೀಯರ ಮಧ್ಯೆ ಭಿನ್ನಾಭಿಪ್ರಾಯ ಕಾಣುತ್ತಿದೆ. ಈ ಪ್ರಕರಣ ಎಲ್ಲಿಗೆ ಯಾವ ಹಂತಕ್ಕೆ ತಲುಪುತ್ತದೆ ಅನ್ನೋದು ಕಾದು ನೋಡಬೇಕಿದೆ.
