ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿನ ಬೆಲೆ ನಿಗದಿ ಹೋರಾಟದ ಕಿಚ್ಚು ನಿಂತಿಲ್ಲ. ತಮ್ಮ ಉಗ್ರ ಹೋರಾಟದ ಮೂಲಕ ಏಕರೂಪದ ಬೆಲೆ ಟನ್‌ಗೆ ₹3300 ಪಡೆಯುವಲ್ಲಿ ಮುಧೋಳ ತಾಲೂಕಿನ ರೈತರು ಯಶಸ್ವಿಯಾದ ಬೆನ್ನಲ್ಲೇ, ಇದೀಗ ಜಮಖಂಡಿ ಮತ್ತು ಬೀಳಗಿ ತಾಲೂಕಿನ ರೈತರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಕಬ್ಬಿನ ಬೆಲೆ ನಿಗದಿಪಡಿಸುವುದು ‘ಕಬ್ಬಿಣದ ಕಡಲೆ’ಯಾದಂತಿದ್ದು, ಜಿಲ್ಲೆಯ ಒಟ್ಟು 14 ಕಾರ್ಖಾನೆಗಳ ಪೈಕಿ ಕೇವಲ 4 ಕಾರ್ಖಾನೆಗಳಲ್ಲಿ ಮಾತ್ರ ಏಕರೂಪದ ದರ ನಿಗದಿಯಾಗಿದೆ. ಇನ್ನುಳಿದ 10 ಕಾರ್ಖಾನೆಗಳಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಈ ಹಿಂದೆ ನಡೆದ ತೀವ್ರ ಹೋರಾಟದಲ್ಲಿ ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಬಿದ್ದಿದ್ದು, ಕಲ್ಲು ತೂರಾಟವೂ ನಡೆದಿತ್ತು. ಈ ಉಗ್ರ ಹೋರಾಟಕ್ಕೆ ಮಣಿದು, ಜೆಮ್ ಸಕ್ಕರೆ ಕಾರ್ಖಾನೆ, ನಿರಾಣಿ ಶುಗರ್ಸ್, ಐಸಿಪಿಎಲ್ ಪ್ರಭುಲಿಂಗೇಶ್ವರ ಕಾರ್ಖಾನೆಗಳು ಸೇರಿದಂತೆ ಒಟ್ಟು ನಾಲ್ಕು ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಏಕರೂಪದ ಬೆಲೆ ₹3300 ಕೊಡಲು ಒಪ್ಪಿಗೆ ನೀಡಿವೆ. ಆದರೆ, ಉಳಿದ 10 ಕಾರ್ಖಾನೆಗಳು ಮಾತ್ರ ಸರ್ಕಾರದ ಮಾರ್ಗಸೂಚಿಯಂತೆ ರಿಕವರಿ ಆಧಾರಿತ ಬೆಲೆಯನ್ನೇ ನೀಡುವುದಾಗಿ ಪಟ್ಟು ಹಿಡಿದಿವೆ.
ಒಂದೆಡೆ ಜಿಲ್ಲಾಡಳಿತದ ಸತತ ಮನವೊಲಿಕೆ ಪ್ರಯತ್ನಗಳು ವಿಫಲವಾಗಿದ್ದು, ಕಾರ್ಖಾನೆ ಮಾಲೀಕರು ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಮುಧೋಳ ರೈತರು ಈಗ ಇತರೆ ಕಾರ್ಖಾನೆಗಳ ವಿರುದ್ಧವೂ ಗುಡುಗಿದ್ದಾರೆ. “ನಾವು ಇತರೆ ಕಾರ್ಖಾನೆ ವ್ಯಾಪ್ತಿಯ ರೈತರ ಜೊತೆಗೂ ಮತ್ತೆ ಅಖಾಡಕ್ಕೆ ಇಳಿಯುತ್ತೇವೆ. ಎಲ್ಲ ಕಾರ್ಖಾನೆಗಳೂ ಕಬ್ಬಿಗೆ ಟನ್‌ಗೆ ₹3300 ಏಕರೂಪದ ಬೆಲೆ ಕೊಡಲೇಬೇಕು,” ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಉಳಿದ ಕಾರ್ಖಾನೆಗಳು ಏಕರೂಪ ಬೆಲೆ ನೀಡಲು ಒಪ್ಪದಿದ್ದರೆ, ಮತ್ತೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕುವುದಾಗಿ ರೈತ ಮುಖಂಡರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

