Bagalkot

ಕಬ್ಬಿನ ದರ ನಿಗದಿಗಾಗಿ ನಡೆದ 3ನೇ ಸುತ್ತಿನ ಸಭೆ ವಿಫಲ

Share

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬಿನ ದರ ನಿಗದಿಗಾಗಿ ರೈತರ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ. ದರ ನಿಗದಿಗಾಗಿ ನಡೆದ 3ನೇ ಸುತ್ತಿನ ಸಭೆ ವಿಫಲವಾಗಿದೆ. ಜಿಲ್ಲಾಧಿಕಾರಿ, ಎಸ್ಪಿ, ಸಿಇಓ ಸೇರಿದಂತೆ ಹಲವು ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ್ದಾರೆ.ಅಧಿಕಾರಿಗಳು ಪ್ರವಾಸಿ ಮಂದಿರದಿಂದ ಹೊರಬರಲು ಪರದಾಡುತ್ತಿದ್ದಾರೆ.

ಮುಧೋಳದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ (ಡಿಸಿ) ಸಂಗಪ್ಪ, ಎಸ್ಪಿ ಸಿದ್ದಾರ್ಥ್ ಗೊಯಲ್ ಮತ್ತು ಕಾರ್ಖಾನೆ ಮಾಲೀಕರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಸಲಾಯಿತು. ರೈತರ ಬೇಡಿಕೆಗೆ ಜಿಲ್ಲಾಡಳಿತ ಸರಿಯಾಗಿ ಸ್ಪಂದಿಸದ ಕಾರಣ ದರ ನಿಗದಿಗಾಗಿ ನಡೆದ 3ನೇ ಸುತ್ತಿನ ಸಭೆ ವಿಫಲವಾಗಿದೆ.ಸತತ 6 ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ ಒಮ್ಮತ ಮೂಡದ ಕಾರಣ, ರೊಚ್ಚಿಗೆದ್ದ ರೈತರು ಪ್ರವಾಸಿ ಮಂದಿರದ ಗೇಟ್ ಬಂದ್ ಮಾಡಿ ಪ್ರತಿಭಟನೆಗೆ ಕುಳಿತು, ಜಿಲ್ಲಾಧಿಕಾರಿ, ಎಸ್ಪಿ, ಸಿಇಓ ಸೇರಿದಂತೆ ಹಲವು ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ್ದಾರೆ.ಅಧಿಕಾರಿಗಳು ಪ್ರವಾಸಿ ಮಂದಿರದಿಂದ ಹೊರಬರಲು ಪರದಾಡುತ್ತಿದ್ದಾರೆ. ರೈತರು ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡುವಂತೆ ಪಟ್ಟು ಹಿಡಿದಿದ್ದಾರೆ.ಸಂಧಾನ ಸಭೆಯ ಕೊನೆ ಹಂತದಲ್ಲಿ ₹3,350 ಏಕರೂಪ ದರ ನೀಡುವಂತೆ ರೈತರು ಒತ್ತಾಯಿಸಿದರು, ಆದರೆ ಕಾರ್ಖಾನೆ ಮಾಲೀಕರು ₹3,300 ಏಕರೂಪ ದರ ನೀಡಲು ಕಸರತ್ತು ನಡೆಸುತ್ತಿದ್ದಾರೆ.ರೈತರ ಹೋರಾಟವು ₹3,500 ದರಕ್ಕಾಗಿ ಮುಂದುವರೆದಿದೆ.

ದರ ನಿಗದಿಯಾಗದ ಹಿನ್ನೆಲೆಯಲ್ಲಿ ಇಂದು ಮುಧೋಳ ಸಂಪೂರ್ಣ ಬಂದ್ ಆಗಿದೆ.ರೈತರು ವಿಜಯಪುರ – ಬೆಳಗಾವಿ ಹೆದ್ದಾರಿಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಸಬಾ ಜಂಬಗಿ ಕ್ರಾಸ್ ಬಳಿ ರಸ್ತೆ ಬಂದ್ ಮಾಡಿ ಅಲ್ಲೇ ಅಡುಗೆ ಮಾಡಿ ಪ್ರತಿಭಟಿಸುತ್ತಿದ್ದಾರೆ.ಮುಧೋಳ- ಬೀಳಗಿ ರಸ್ತೆಗೆ ಮುಳ್ಳು ಕಂಟಿ ಹಚ್ಚಿ ಬಂದ್ ಮಾಡಲಾಗಿದ್ದು, ಬುದ್ನಿ ಪಿಎಂ ಗ್ರಾಮದ ಬಳಿಯೂ ರಸ್ತೆ ತಡೆದು ಪ್ರತಿಭಟನೆ ನಡೆಯುತ್ತಿದೆ. ಗ್ರಾಮೀಣ ಭಾಗದ ಎಲ್ಲ ರಸ್ತೆಗಳನ್ನು ಬಂದ್ ಮಾಡಲು ರೈತರು ಕರೆ ನೀಡಿದ್ದಾರೆ.ರಸ್ತೆ ಬಂದ್‌ನಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಬಸ್, ಟ್ರ್ಯಾಕ್ಟರ್, ಮತ್ತು ಇತರೆ ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರತಿಭಟನಾಕಾರರ ಕಿಚ್ಚು ಕ್ಷಣ ಕ್ಷಣಕ್ಕೂ ಮತ್ತಷ್ಟು ಹೆಚ್ಚುತ್ತಿದ್ದು, ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

Tags:

error: Content is protected !!