ವಿಜಯಪುರ ನಗರದ ಖಾಸಗಿ ಹೊಟೇಲ್ ಅಲ್ಲಿ ಎರಡು ದಿನದ ರಾಷ್ಟೀಯ ಮಟ್ಟದ ಡೈಕಾನ್ ಮಧುಮೇಹ ವೈದ್ಯಕೀಯ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು.
ಶ್ರೀ ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಸಂಶೋದನೆ ಕೇಂದ್ರದ ನೇತೃತ್ವದಲ್ಲಿ ಶ್ರೀ ತುಳಸಿಗಿರೀಶ ಫೌಂಡೇಶನ್, ಬಿ.ಎಲ್.ಡಿ ವಿಶ್ವವಿದ್ಯಾಲಯ, ಎ.ಸಿ.ಪಿ ಇಂಡಿಯಾ ಚಾಪ್ಟರ್, ರಾಜ್ಯ ಮಧುಮೇಹ ಸಂಶೋಧನಾ ಕೇಂದ್ರ (RSSDI) ಹಾಗೂ ವಿಜಯಪುರದ ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಮಧುಮೇಹ ವೈದ್ಯಕೀಯ ಸಮ್ಮೇಳನದಲ್ಲಿ(ಡೈಕಾನ್) ಭಾರತದ ವಿವಿಧ ಕಡೆಯಿಂದ ಹಾಗೂ ಕರ್ನಾಟಕದ ವಿವಿಧ ನಗರಗಳಿಂದ ಖ್ಯಾತ ವೈದ್ಯರು ಮತ್ತು ವೈದ್ಯಕೀಯ ವಿಧ್ಯಾರ್ಥಿಗಳು ಭಾಗವಹಿಸಿದರು.
ಸಮ್ಮೇಳನವನ್ನು ಸಂಘಟಿಸಿದ ನಗರದ ಖ್ಯಾತ ಮಧುಮೇಹ ತಜ್ಞರಾದ ಡಾ.ಬಾಬುರಾಜೇಂದ್ರ ಬಿ ನಾಯಿಕ ಮಾತನಾಡಿ ಕೇವಲ ರಾಜಧಾನಿಗಳಂತ ನಗರಗಳಲ್ಲಿ ಸಿಮೀತವಾಗಿದ್ದ ಇಂತಹ ಸಮ್ಮೇಳನಗಳನ್ನು ನಮ್ಮ ವಿಜಯಪುರ ಜಿಲ್ಲೆಯಲ್ಲಿ ಸತತವಾಗಿ ಆಯೋಜನೆ ಮಾಡಿರುವುದಕ್ಕೆ ಆತ್ಮಸಂತೃಪ್ತಿ ಭಾವ ನಮಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಧುಮೇಹ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿದ್ದು ದೇಶದ ಖ್ಯಾತ ವೈದ್ಯರುಗಳು ಆಗಮಿಸಿ ಅವರ ವಿಷಯಗಳನ್ನು ಮಂಡಿಸಿ ಚರ್ಚೆ ಮಾಡುವದರಿಂದ ಅನೇಕ ವೈದ್ಯರಿಗೆ ಮತ್ತು ವೈದ್ಯಕೀಯ ವಿಧ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ಎಲ್.ಡಿ ವಿಶ್ವವಿದ್ಯಾಲಯದ ಪ್ರೋ.ಡಾ.ವೈ.ಎಮ್.ಜಯರಾಜ ಇಂತಹ ಕಾರ್ಯಕ್ರಮಗಳಿಂದ ಉತ್ತರ ಕರ್ನಾಟಕ ಭಾಗದ ಹಾಗೂ ವಿಜಯಪುರ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆ ಮೇಲೆ ಬಿ.ಎಮ್.ಪಾಟೀಲ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ.ಆರ್.ಸಿ.ಬಿದರಿ, ಹಿರಿಯ ಪತ್ರಕರ್ತರಾದ ಶ್ರೀ ವಾಸುದೇವ ಹೇರಕಲ್, ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯಾದ ಡಾ.ಎಸ್.ಎನ್.ಬೆಂತೂರ, ಖಜಾಂಜಿಯಾದ ಡಾ.ಶೀತಲ್ ನಾಯ್ಕ್, ಸೈಂಟಿಫಿಕ್ ಕಮೀಟಿ ಪ್ರಮುಖರಾದ ಡಾ.ಮಾಧವ ಪ್ರಭು ಉಪಸ್ಥಿತರಿದ್ದರು.
ಗುಜರಾತ ರಾಜ್ಯದ ವಡೋದರದ ಡಾ.ಆಕಾಶಕುಮಾರ ಸಿಂಗ್ ಅವರು ಆರೋಗ್ಯ ಕ್ಷೇತ್ರದ ನೂತನ ಸಂಶೋಧನೆಗಳ ಕುರಿತು ಉಪನ್ಯಾಸ ನೀಡಿದರು, ಈ ವರ್ಷದ ಡಾ.ಎಮ್.ಬಿ ಪಾಟೀಲ ದತ್ತಿ ಉಪನ್ಯಾಸವನ್ನು ಬೆಂಗಳೂರಿನ ಖ್ಯಾತ ಮಧುಮೇಹ ತಜ್ಞರಾದ ಡಾ.ಅನಿಲಕುಮಾರ ನೆರವೇರಿಸಿದರು. ರಾಷ್ಟೀಯ ಮಟ್ಟದ ಖ್ಯಾತಿಯ ವೈದ್ಯರಾದ ದೆಹಲಿಯ ಡಾ.ರಾಜೇಶ ಕೇಸರಿ, ಕೋಲ್ಕತಾದ ಡಾ.ಬಿಜಯ್ ಪಟ್ನಿ, ಓರಿಸ್ಸಾದ ಡಾ.ಜಯಂತ್ ಪಾಂಡಾ, ರಾಂಚಿಯ ವಿನೀತ್ ಜಗನಾನಿ ಸೇರಿದಂತೆ ನಲವತ್ತು ವೈದ್ಯರುಗಳು ತಮ್ಮ ವಿಚಾರಗಳನ್ನು ಮಂಡಿಸಿದರು.
ಇದೇ ಸಮ್ಮೇಳನದಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಮಂಡನೆ ಸ್ಪರ್ಧೆಯನ್ನು ವೈದ್ಯಕೀಯ ವಿಧ್ಯಾರ್ಥಿಗಳಿಗೆ ಆಯೋಜನೆ ಮಾಡಲಾಗಿತ್ತು, ಸುಮಾರು 28 ಕ್ಕಿಂತ ಹೆಚ್ಚಿನ ವಿಷಯಗಳು ಕುರಿತು ಸಂಶೋದನಾ ವಿಷಯಗಳು ಮಂಡನೆಯಾಗಿದ್ದು ವಿಶೇಷ. ಒಟ್ಟಾರೆ ಎರಡು ದಿನದ ಈ ಸಮ್ಮೇಳನದಲ್ಲಿ ವಿಜಯಪುರ ಮತ್ತು ಉತ್ತರ ಕರ್ನಾಟಕ ಭಾಗದ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ತಿಳಿಸಲಾಯಿತು.