ನವೆಂಬರ್ ಕ್ರಾಂತಿ ಏನೂ ಇಲ್ಲ, ಒನ್ಲಿ ಶಾಂತಿ. ಯತ್ನಾಳ್ ನನ್ನ ಸ್ನೇಹಿತರು. ಯತ್ನಾಳ್ ಯತ್ನಾಳ್ ಆಗಿರಬೇಕೆ ಹೊರತು ಕಿತ್ನಾಳ್ ಆಗಿರಬಾರದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಶಾಸಕ ಜೆ.ಟಿ. ಪಾಟೀಲ್ ಅವರು, ನರೇಂದ್ರಸ್ವಾಮಿ ಸಚಿವರಾಗುವ ಸೂಚನೆ ಇದೆ ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಕೇಳಿದಾಗ, “ನಾನು ಪಕ್ಷದ ಅಧ್ಯಕ್ಷನೂ ಅಲ್ಲ, ಯಾವುದೇ ಸಚಿವನೂ ಅಲ್ಲ. ಇಲ್ಲಿ ನಾನು ಬಂದಿರುವ ಉದ್ದೇಶಕ್ಕೆ ಸೀಮಿತ ಆಗ್ತಿನಿ” ಎಂದು ಹೇಳಿದರು. ಜೆ.ಟಿ. ಪಾಟೀಲ್ ನನ್ನ ಹಿರಿಯರು, ನನ್ನ ಬಗ್ಗೆ ಅವರಿಗೆ ಆತ್ಮೀಯ ವಿಶ್ವಾಸವಿದೆ ಎಂದರು.
ದೆಹಲಿಗೆ ಹೋಗಿದ್ದ ವಿಚಾರದ ಬಗ್ಗೆ, ನಿನ್ನೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಹೋಗಿದ್ದೆ. ಅಲ್ಲಿ ಎಲ್ಲೂ ರಾಜಕಾರಣ ಮಾತಾಡಿಲ್ಲ. ಐದು ನಿಮಿಷ ನಾನು ಮಾಡುತ್ತಿರುವ ಕಾರ್ಯದ ಬಗ್ಗೆ, ಮಂಡಳಿಯ ಜವಾಬ್ದಾರಿ ಹೇಗೆ ಹೆಚ್ಚಿಸಿದ್ದೇನೆ ಎಂಬುದರ ಬಗ್ಗೆ ಮಾಹಿತಿ ಕೊಟ್ಟೆ. ಬೇರೆ ಏನೂ ಮಾತಾಡಿಲ್ಲ, ರಾಹುಲ್ ಗಾಂಧಿ ಸಹ ರಾಜಕೀಯವಾಗಿ ಏನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
‘ನವೆಂಬರ್ ಕ್ರಾಂತಿ’ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ, “ನವೆಂಬರ್ ಕ್ರಾಂತಿ ಏನೂ ಇಲ್ಲ, ಒನ್ಲಿ ಶಾಂತಿ” ಎಂದ ನರೇಂದ್ರಸ್ವಾಮಿ, ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯದನ್ನು ಬಯಸಿ, ಮಾಡಬೇಕಿರುವ ಕೆಲಸದ ಬಗ್ಗೆ ಚರ್ಚೆ ಮಾಡೋಣ. ಅದು ಪಕ್ಷದ ಆಂತರಿಕ ವಿಚಾರ, ಆ ಜವಾಬ್ದಾರಿಯ ಜಾಗದಲ್ಲಿ ನಾನಿಲ್ಲ, ಉತ್ತರ ಕೋಡೋದು ಸಮಂಜಸವಲ್ಲ ಎಂದರು.
ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ, “ಯತ್ನಾಳರಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಯತ್ನಾಳ ಅವರು ನನಗೆ ಆತ್ಮೀಯರು ಕೂಡ. ಯತ್ನಾಳ ಅವರು ಯತ್ನಾಳ ಆಗಿಯೇ ಇರಬೇಕು, ಕಿತ್ನಾಳ ಆಗಬಾರದು” ಎಂದು ವಿಧಾನಸಭೆಯಲ್ಲಿ ಹೇಳಿದ್ದಾಗಿ ನರೇಂದ್ರಸ್ವಾಮಿ ತಿಳಿಸಿದರು.
Bagalkote
         ನವೆಂಬರ್ ಕ್ರಾಂತಿ ಏನೂ ಇಲ್ಲ, ಒನ್ಲಿ ಶಾಂತಿ– ನರೇಂದ್ರಸ್ವಾಮಿ
 
				
 
			 
 
 
  
					 
						  
						  
						  
						  
						 
						 
						