ಆ ಬ್ಯಾಂಕ್ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದು. ವಚನ ಪಿತಾಮಹ ಫ.ಗು.ಹಳಕಟ್ಟಿ ಕಟ್ಟಿದ ಬ್ಯಾಂಕ್: ಈ ಬ್ಯಾಂಕ್ ಗೆ ಚುನಾವಣೆ ನಡೆದು ಮತ್ತೊಮ್ಮೆ ಹಳೆಯ ಪ್ಯಾನಲ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಾಲಿ ಹಾಗೂ ಮಾಜಿ ಸಚಿವರು ಪಕ್ಷ ಭೇಧ ಮರೆತು ಹಳೆ ಪ್ಯಾನಲ್ ಪರ ಪ್ರಚಾರ ಮಾಡಿದ ಕಾರಣ ಹಳೆ ಪ್ಯಾನಲ್ ಅದ್ದೂರಿ ಜಯ ಗಳಿಸಿದೆ. ಮಧ್ಯರಾತ್ರಿಯಲ್ಲಿ ಸಂಭ್ರಮಾಚರಣೆ ಆಚರಿಸಲಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ವಿಜಯಪುರ ಜಿಲ್ಲೆಯ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಪ್ರತಿಷ್ಠಿತ ಬ್ಯಾಂಕ್. ಒಂದು ಬಾರಿ ಸುಪರ್ ಸೀಡ್ ಆಗಿ ವೈಭವದ ದಿನಗಳನ್ನು ಕಳೆದು ಕೊಂಡಿದ್ದ ಬ್ಯಾಂಕ್. ಇದೀಗ ಮತ್ತೆ ತನ್ನ ಗತವೈಭವಕ್ಕೆ ಮರಳಿದೆ. ಇಂತಹ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆದು ಹಳೆ ಪ್ಯಾನಲ್ ಭರ್ಜರಿ ಜಯಭೇರಿ ಭಾರಿಸಿದೆ. ಇನ್ನೂ ಹೊಸ ಅಭ್ಯರ್ಥಿಗಳು ಕೂಡಾ ಹಳೆ ಪ್ಯಾನಲ್ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಸಚಿವ ಶಿವಾನಂದ ಪಾಟೀಲ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೀಸಿದ ದಾಳಕ್ಕೆ ಹಳೆ ಪ್ಯಾನಲ್ ಜಯಭೇರಿ ಬಾರಿಸಿದೆ. ಬ್ಯಾಂಕ್ ನ ಹಿತೈಷಿಗಳ ಬೃಹತ್ ಸಭೆಯನ್ನು ನಡೆಸುವ ಮೂಲಕ ನಮ್ಮ ಬೆಂಬಲ ಹಳೆಯ ಪ್ಯಾನಲ್ ಗೆ ಇದೆ ಎನ್ನುವ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ ಬೇರೆ ಬೇರೆ ಪಕ್ಷದಲ್ಲಿ ಇದ್ದರೂ ಬ್ಯಾಂಕ್ ನಲ್ಲಿ ಪಕ್ಷರಹಿತ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿ ಎನ್ನದೇ ಇಬ್ಬರು ಕೂಡಿ ನಡೆಸಿದ ತಂತ್ರಕ್ಕೆ ಮತದಾರ ಪ್ರಭುಗಳು ಸಿದ್ದೇಶ್ವರ ಬ್ಯಾಂಕ್ ಗೆ ಹಳೆಯ ಪ್ಯಾನಲ್ ಬಹುಮತ ನೀಡಿ ಗೆಲ್ಲಿಸಿದ್ದಾರೆ.
ಇನ್ನೂ ಬ್ಯಾಂಕ್ ಚುನಾವಣೆಯಲ್ಲಿ ಈ ಬಾರಿ ಬರೊಬ್ಬರಿ 19 ಸ್ಥಾನಗಳಿಗೆ 39 ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಇದ್ದರು. ಮತದಾರರಿಗೆ ಇದು ತಲೆ ನೋವಾಗಿತ್ತು. ನಗರದ ಎಸ್ ಎಸ್ ಹೈಸ್ಕೂಲ್ ನಲ್ಲಿ ಮತದಾನ ಹಾಗೂ ಎಣಿಕೆ ಪ್ರಕ್ರಿಯೆ ನಡೆಯಿತು. ಚುನಾವಣೆಯು ರವಿವಾರ ನಡೆಯಿತು. ಸಾಯಂಕಾಲ 4 ಕ್ಕೆ ಮುಕ್ತಾಯವಾದ ಮತದಾನದ ಬಳಿಕ ಮತ ಎಣಿಕೆ ನಡೆಯುತ್ತಿರುವಾಗ ಮತದಾರರು ಯಾರು ಗೆಲುವು ಸಾಧಿಸುತ್ತಾರೆ ಎಂಬ ತವಕ ತಣಿಸಿಕೊಳ್ಳಲು ಮದ್ಯರಾತ್ರಿಯವರೆಗೆ ಮತ ಎಣಿಕೆ ಕೇಂದ್ರದ ಎದುರು ಕಾದು ನಿಂತಿದ್ದರು. ಅತ್ತ ಫಲಿತಾಂಶ ಪ್ರಕಟವಾಗುತ್ತಲೇ ಇತ್ತ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಗುಲಾಲು ಹಚ್ಚಿಕೊಂಡು ಸಂಭ್ರಮಿಸಿದರು. ಮದ್ಯರಾತ್ರಿಯಲ್ಲಿ ಹಳೆ ಪ್ಯಾನಲ್ ನ ವಿಜಯಶಾಲಿಯಾದ ಎಲ್ಲಾ ಅಭ್ಯರ್ಥಿಗಳು ಹೊರಗೆ ಬಂದ ಕೂಡಲೇ ಬೆಂಬಲಿಗರು ಬ್ಯಾಂಕ್ ನವರೆಗೆ ಮೆರವಣಿಗೆ ನಡೆಸಿ ಗುಲಾಲು ಎರಚಿ ಹಾರ ತುರಾಯಿ ಶಾಲು ಹಾಕುವ ಮೂಲಕ ಅಭಿನಂಧಿಸಿದರು. ಇನ್ನೂ ಅಭ್ಯರ್ಥಿಗಳು ಇದು ನಮ್ಮ ಜಯವಲ್ಲಾ ಮತದಾರರ ಜಯ ಎಂದು ಮರು ಅಭಿನಂಧಿಸಿದರು.
ಒಟ್ಟಾರೆ ಪ್ರತಿಷ್ಠಿತ ಬ್ಯಾಂಕ್ ಮತ್ತೊಂದು ಬಾರಿ ಹಳೆ ಪ್ಯಾನಲ್ ನ ಕೈಯಲ್ಲಿ ಆಡಳಿತ ಹೊಂದಲಿದೆ. ಈ ಬಾರಿಯೂ ಹಳೆ ಪ್ಯಾನಲ್ ಮತ್ತೆ ಬ್ಯಾಂಕ್ ಉನ್ನತಿಗೆ ಅದ್ಯಾವ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಕಾದುನೋಡಬೇಕಿದೆ. ಅಲ್ಲದೆ ಗೆದ್ದ ಅಭ್ಯರ್ಥಿಗಳಿಗೆ ಹೊಸ ಅಭ್ಯರ್ಥಿಗಳು ಒಡ್ಡಿದ ಸವಾಲು ಹಳೆ ಪ್ಯಾನಲ್ ಗೆ ಎಚ್ಚರಿಕೆ ಗಂಟೆಯಾಗಿದೆ.