Kittur

ಬೆಳಗಾವಿ ವಿಮಾನ‌ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರಿಡಲು ಕೇಂದ್ರಕ್ಕೆ ಪತ್ರ ಬರೆದ್ರು ಇದು ವರೆಗೂ ಕ್ರಮವಹಿಸಿಲ್ಲ; ಸಿಎಂ ಅಸಮಾಧಾನ

Share

 

ಕಿತ್ತೂರು ರಾಣಿ‌ ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಬೆಳಗಾವಿ ವಿಮಾನ‌ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರಿಡಲು ಕೇಂದ್ರಕ್ಕೆ ಪತ್ರ ಬರೆದು ಒಂದು‌ ವರ್ಷವಾದರೂ ಕೇಂದ್ರ‌ ಸರ್ಕಾರ ಇದುವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.‌

ಜಿಲ್ಲಾಡಳಿತ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ 201ನೇ ವರ್ಷದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕಿತ್ತೂರು ರಾಣಿ ಚನ್ನಮ್ಮ 1824ರ ಅಕ್ಟೋಬರ್ 23ರಂದು ಬ್ರಿಟಿಷರ ವಿರುದ್ಧ ಹೋರಾಡಿ ಜಯಗಳಿಸಿದ್ದರು. ಈ ವಿಜಯದ ಸವಿನೆನಪಿಗಾಗಿ ಪ್ರತೀ ವರ್ಷ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ. ಬ್ರಿಟಿಷರಿಗೆ ಶರಣಾಗತಿಯ ಬದಲು ಹೋರಾಟಕ್ಕೆ ಧುಮುಕಿದ ಚನ್ನಮ್ಮ, ರಾಯಣ್ಣ ಮತ್ತು ಅಮಟೂರ‌ ಬಾಳಪ್ಪನವರು ಸ್ವಾಭಿಮಾನದ ಸಂಕೇತ. ಥ್ಯಾಕರೆಯನ್ನು ಕೊಂದು ಬ್ರಿಟಿಷರ ವಿರುದ್ಧ ಜಯಗಳಿಸಿದ್ದು ಚನ್ನಮ್ಮನ ಸಾಧನೆಯ‌ ಕಿರೀಟ ಎಂದು ಬಣ್ಣಿಸಿದರು.

ವ್ಯಾಪಾರ ಮಾಡಲು ಬಂದ ಬ್ರಿಟೀಷರು ಭಾರತೀಯರನ್ನು ಪರಸ್ಪರ ಎತ್ತಿಕಟ್ಟಿ ಇಡೀ ದೇಶವನ್ನು ವಶಕ್ಕೆ ಪಡೆದುಕೊಂಡರು. ಬ್ರಿಟೀಷರಿಗೆ ನಮ್ಮವರೇ ಬೆಂಬಲ ಕೊಡುತ್ತಿದ್ದರು. ಚನ್ನಮ್ಮ ಮತ್ತು ರಾಯಣ್ಣನವರ ವಿರುದ್ಧ ಪಿತೂರಿ ಮಾಡಿದ್ದರು. ಈಗಲೂ ಭಾರತೀಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಎತ್ತಿ ಕಟ್ಟಿ ಕಚ್ಚಾಡಿಸುವವರು ನಮ್ಮ ನಡುವೆಯೇ ಇದ್ದಾರೆ. ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, ಚನ್ನಮ್ಮನ ಇತಿಹಾಸವನ್ನು ದೇಶದ ಜನತೆಗೆ ಮುಟ್ಟಿಸಲು ಪ್ರತೀ ವರ್ಷ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಚನ್ನಮ್ಮನ ಕಿತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ. ಕಿತ್ತೂರಿನ ಐತಿಹಾಸಿಕ ಸ್ಥಳಗಳ ಜೀರ್ಣೊದ್ಧಾರಕ್ಕೆ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ಮಲಪ್ರಭಾ ಸಹಕಾರಿ ಕಾರ್ಖಾನೆ‌ ದುಸ್ಥಿತಿಯಲ್ಲಿದ್ದು, ರೈತರ ಅನುಕೂಲಕ್ಕಾಗಿ‌ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಹಾಗೂ ಕಿತ್ತೂರಿನ ಐತಿಹಾಸಿಕ ಸ್ಥಳಗಳನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಕಾದರವಳ್ಳಿ‌ ಸೀಮಿಮಠದ ಡಾ.ಫಾಲಾಕ್ಷ ಶಿವಯೋಗೀಶ್ವರರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕರಾದ ಎನ್.ಎಚ್.ಕೋನರೆಡ್ಡಿ, ಆಸಿಫ್(ರಾಜು) ಸೇಠ್, ವಿಶ್ವಾಸ್ ವೈದ್ಯ, ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ಜಿ.ಪಂ.ಸಿಇಓ ರಾಹುಲ್ ಶಿಂಧೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!