Accident

ಹೈದರಾಬಾದ್-ಬೆಂಗಳೂರು ಬಸ್‌ ದುರಂತ

Share

 

ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದು ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿ ಭಾರಿ ಬೆಂಕಿಗೆ ಆಹುತಿಯಾಗಿದ್ದು, 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಇಂದು ನಸುಕಿನ ಜಾವ ಕರ್ನೂಲ್‌ ಉಪನಗರ ಚಿನ್ನಟೇಕೂರಿನ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ ದುರಂತ ಸಂಭವಿಸಿದೆ.
ವೇಮುರಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್‌ನಲ್ಲಿ ಇಬ್ಬರು ಚಾಲಕರು ಸೇರಿ ಒಟ್ಟು 43 ಜನರಿದ್ದರು. ಅವರಲ್ಲಿ 39 ವಯಸ್ಕರು ಹಾಗೂ ಇಬ್ಬರು ಚಿಕ್ಕ ಮಕ್ಕಳು ಸೇರಿ 41 ಪ್ರಯಾಣಿಕರಿದ್ದರು. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಜೀವಂತವಾಗಿ ಸುಟ್ಟುಹೋಗಿದ್ದು, 19 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈವರೆಗೆ 19 ಶವಗಳನ್ನು ಹೊರತೆಗೆಯಲಾಗಿದ್ದು, ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಡಿಐಜಿ ಪ್ರವೀಣ್ ಮಾಹಿತಿ ನೀಡಿದ್ದಾರೆ.
ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರು ಬೆಂಕಿಯಿಂದ ಎಚ್ಚರಗೊಂಡು, ಕೆಲವರು ಸಹಾಯಕ್ಕಾಗಿ ಕಿರುಚಿಕೊಂಡು ಬಸ್ಸಿನ ತುರ್ತು ಬಾಗಿಲು ಮುರಿದು ಹೊರಬಂದಿದ್ದಾರೆ. ಆದರೆ, ಹಲವರು ಬೆಂಕಿಯಲ್ಲಿ ಸಿಲುಕಿ ದಾರುಣವಾಗಿ ಸಜೀವ ದಹನವಾಗಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಗಾಯಾಳುಗಳನ್ನು ಕರ್ನೂಲ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಬಸ್ ಚಾಲಕ ಮತ್ತು ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಗರದವರು ಎಂದು ವರದಿಯಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದು, ಈ ದುರಂತದಲ್ಲಿ ಓರ್ವ ಬೈಕ್ ಸವಾರ ಕೂಡ ಸಾವನ್ನಪ್ಪಿದ್ದಾರೆ.

Tags:

error: Content is protected !!