

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಚಿತ್ರಭಾನುಕೋಟೆಯ ಆರಾಧ್ಯ ದೈವ ಸಚ್ಚಿದಾನಂದ ರಾಮಾರೂಡರ ಜಾತ್ರಾ ಮಹೋತ್ಸವದ ಅಂಗವಾಗಿ ಅದ್ದೂರಿ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಈ ಭವ್ಯ ರಥೋತ್ಸವವನ್ನು ಸಾವಿರಾರು ಭಕ್ತಸಾಗರ ಕಣ್ತುಂಬಿಕೊಂಡರು.ಈ ಜಾತ್ರಾ ಮಹೋತ್ಸವದ ವಿಶೇಷ ಆಕರ್ಷಣೆಯೆಂದರೆ, ಕೆಲ ಭಕ್ತರು ಹಣದ ನೋಟುಗಳಿಂದ ತಯಾರಿಸಿದ ವಸ್ತ್ರಗಳನ್ನು ಧರಿಸಿ ಎಲ್ಲರ ಗಮನ ಸೆಳೆದರು. ಒಬ್ಬ ಯುವಕ ₹100ರ ನೋಟುಗಳನ್ನು ಬಳಸಿ ತಯಾರಿಸಿದ ಪೇಟಾ ಧರಿಸಿದ್ದನು. ಕಲ್ಲಪ್ಪ ಎಂಬ ಭಕ್ತ ₹50,000 ಮೌಲ್ಯದ ನೋಟುಗಳಿಂದ ತಯಾರಿಸಿದ ಅಂಗಿಯನ್ನು ಧರಿಸಿ ಭಕ್ತಿ ಮೆರೆದನು. ಇದೇ ರೀತಿ, ಚಿತ್ರಭಾನುಕೋಟೆ ಗ್ರಾಮದ ಯುವಕ ಅವ್ವಪ್ಪ ನಾಯಕ್ ಅವರು ಸಂಪೂರ್ಣ ಹಣದ ನೋಟುಗಳಿಂದ ಮಾಡಿದ ರೂಮಾಲ್ ಧರಿಸಿ ಸಂತೋಷಪಟ್ಟರು. ಹೀಗೆ, ರಾಮಾರೂಡರ ಮೇಲಿನ ಭಕ್ತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ ಈ ಯುವಕರ ಪ್ರಯತ್ನವು ರಥೋತ್ಸವಕ್ಕೆ ವಿಶೇಷ ಕಳೆ ನೀಡಿತ್ತು.

 
			 
 
 
  
					 
				 
						  
						  
						  
						  
						 
						 
						