2 ದಿನದೊಳಗೆ ಜಲಾಶಯಕ್ಕೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಯೋಗ್ಯ ಪರಿಹಾರ ನೀಡಬೇಕು. ಇಲ್ಲದ್ದಿದ್ದರೇ, ಕಾಮಗಾರಿಯನ್ನು ಬಂದ್ ಮಾಡಲಾಗುವುದೆಂದು ಎಚ್ಚರಿಕೆ ನೀಡಿ, ಬಸುರ್ತೆ ಗ್ರಾಮದ ರೈತರು ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿದರು.
ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಜಲಾಶಯ ನಿರ್ಮಿಸಲು 80 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೇ, ಸರಿಯಾದ ಪರಿಹಾರ ನೀಡಿಲ್ಲವೆಂದು ನಿನ್ನೆ ರೈತರು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಧರಣಿ ನಡೆಸಿ, ನಂತರ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳು ನಾಳೆ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು. ಎಲ್ಲರೂ ಸಭೆಗೆ ಬರಬೇಕೆಂದು ಹೇಳಿದ್ದರು. ಆದರೇ, ಜಿಲ್ಲಾಧಿಕಾರಿಗಳು ಇಂದು ಬೇರೆ ಕೆಲಸ ಕಾರ್ಯದಲ್ಲಿ ವ್ಯಸ್ಥರಾದ ಹಿನ್ನೆಲೆ ಸಭೆ ರದ್ದಾಗಿದೆ. ಈ ಹಿನ್ನೆಲೆ ಬಸುರ್ತೆ ಗ್ರಾಮದ ರೈತರು ಡಿಸಿ ಕಚೇರಿ ಎದುರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬೆಳೆದ ಬೆಳೆಗಳ ಮೇಲೆ ಜೆಸಿಬಿ ಹರಿಸಿ ಹಾನಿಪಡಿಸಲಾಗಿದೆ. ಇದರಿಂದಾಗಿ ಕೃಷಿಯನ್ನೇ ನಂಬಿದ ರೈತರ ಕುಟುಂಬಗಳು ಬೀದಿಗೆ ಬಂದಿವೆ. ಕಷ್ಟಪಟ್ಟು ತೋಡಿದ ಬಾವಿಯನ್ನು ಸಹ ಹಾಳು ಮಾಡಲಾಗಿದೆ. ನಿನ್ನೆ ಇದನ್ನ ಖಂಡಿಸಿ ಪ್ರತಿಭಟಿಸಿದಾಗ ಜಿಲ್ಲಾಧಿಕಾರಿಗಳು ಇಂದು ಸಭೆಗೆ ಬನ್ನಿ ಎಂದು ಕರೆದಿದ್ದರೂ, ಇಂದು ಅವರಿಗೆ ಸಭೆಗೆ ಇಲ್ಲ ಎಂದು ಮಹಿಳೆಯರು ಕಣ್ಣೀರು ಹಾಕಿದರು.
ಡ್ಯಾಂ ನಿರ್ಮಿಸಿದರೇ, ನಮ್ಮ ಗ್ರಾಮಗಳು ಕೂಡ ಹಾಳಾಗಲಿವೆ. 2 ದಿನದಲ್ಲಿ ಪರಿಹಾರ ನೀಡಿದರೇ ಡ್ಯಾಂ ನಿರ್ಮಿಸಲು ಅನುಮತಿ ನೀಡುತ್ತೇವೆ. ಇಲ್ಲದಿದ್ದರೇ, ಕಾಮಗಾರಿಯನ್ನು ಬಂದ್ ಮಾಡುತ್ತೇವೆ. ನಮಗೆ ಸರ್ಕಾರಿ ನೌಕರಿಗಳಿಲ್ಲ. ಕೃಷಿಯನ್ನೇ ನಂಬಿ ಬದುಕುವವರು ನಾವು. ಇದ್ದ ನಮ್ಮ ಜಮೀನನ್ನು ಕಸಿದುಕೊಂಡರೇ, ನಾವು ಬದುಕುವಾದರೂ ಹೇಗೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಬಸುರ್ತೆ ಗ್ರಾಮದ ರೈತರು, ರೈತ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

 
			 
 
 
  
					 
				 
						  
						  
						  
						 
						 
						