Vijaypura

ವಿದ್ಯುತ್ ಅವಘಡಕ್ಕೆ ಯುವಕ ಬಲಿ; ಗಜಾನನ ಮಹಾ ಮಂಡಳ ವತಿಯಿಂದ ಕುಟುಂಬಕ್ಕೆ ನೆರವು

Share

ಇಡೀ ಉತ್ತರ ಕರ್ನಾಟಕದಲ್ಲಿ ಅತ್ಯಂತ ಸುವ್ಯವಸ್ಥಿತ, ಶಾಂತಿಯುತ ಗಣೇಶ ವಿಸರ್ಜನೆಗೆ ವಿಜಯಪುರ ಹೆಸರುವಾಸಿ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅವಘಡ ಕಪ್ಪು ಚುಕ್ಕೆಯಂತಾಗಿದೆ. ವಿದ್ಯುತ್ ಅವಘಡದಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಬಡ ಕುಟುಂಬದ ಯುವಕನಿಗೆ ನೌಕರಿ ಸೇರಿದಂತೆ ಪರಿಹಾರ ನೀಡುವಂತೆ ಒತ್ತಾಯ

 

ವಿಜಯಪುರ ನಗರದಲ್ಲಿ 7ನೇ ದಿನ ಗಣೇಶನ ವಿಸರ್ಜನೆಗೆ ಮೂರ್ತಿಯನ್ನು ಸಾಗಿಸುವ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಗಣೇಶ ಮೆರವಣಿಗೆ ವೇಳೆ ಯುವಕರು ಡಿಜೆ ಬಾಕ್ಸ್ ಮೇಲೆ ಕುಳಿತು ಕೋಲಿನಿಂದ ವಿದ್ಯುತ್ ತಂತಿಯನ್ನು ಎತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಶುಭಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ನಗರದ ಡೋಬಲೆ ಗಲ್ಲಿ ನಿವಾಸಿ ಶುಭಂ ಸಂಕಳ (21) ಮೃತ ದುರ್ದೈವಿ. ಸೋಲಾಪುರದ ಡಿಜೆ ಯುವಕ ಪ್ರಭಾಕರ್ ಜಂಗಲೆ (22), ಡೋಬಲೆ ಗಲ್ಲಿಯ ಲಖನ್ ಶ್ರೀಕಾಂತ್ ಚವ್ಹಾಣ್ (28) ಗಾಯಗೊಂಡಿದ್ದರು. ಇಡೀ ವಿಜಯಪುರ ನಗರವೂ ಸೇರಿದಂತೆ ವಿಜಯಪುರ ಜಿಲ್ಲೆ ಬೆಚ್ಚಿಬಿದ್ದಿದೆ. ಸೂತಕದ ಛಾಯೆ ಆವರಿಸಿದೆ. ಇನ್ನೂ ಗಜಾನನ ಮಹಾಮಂಡಳ ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆ ಸಾಂಕೇತಿಕವಾಗಿ ನಡೆಯಿತು. ಪ್ರತಿ ವರ್ಷ ಹತ್ತಾರು ರೀತಿಯ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ನಡೆಯುವ ಮೆರವಣಿಗೆಗೆ ಈ ಬಾರಿ ಸಾಂಪ್ರದಾಯಿಕತೆ ಮಾತ್ರ ಸೀಮಿತವಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಿಗೂ ಸಹ ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಿಲ್ಲ.
ಗಣೇಶನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಂಕೇತಿಕ ಮೆರವಣಿಗೆ ಸಂಚರಿಸಿ ತಾಜ್ ಬಾವಡಿ ಬಳಿ ಇರುವ ಕೃತಕ ಹೊಂಡದಲ್ಲಿ ಗಣೇಶನ ಮೂರ್ತಿ ವಿಸರ್ಜಿಸಲಾಯಿತು.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮೊನ್ನೆ ನಡೆದ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ, ಈ ರೀತಿಯ ಘಟನೆಗಳು ಯಾವತ್ತೂ ನಡೆಯಬಾರದು, ಎಲ್ಲರಿಗೂ ಒಳಿತಾಗಲಿ ಎಂದು ವಿಘ್ನನಿವಾರಕನಲ್ಲಿ ಪ್ರಾರ್ಥಿಸುವೆ ಎಂದರು. ಸರ್ಕಾರ ಕೂಡಲೇ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಘಟನೆಯಲ್ಲಿ ಗಾಯಗೊಂಡ ವರಿಗೂ ಸಹ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿದರು.
ಗಜಾನನ ಮಹಾ ಮಂಡಳ ವತಿಯಿಂದಲೂ ಕುಟುಂಬಕ್ಕೆ ನೆರವಾಗುವ ಕಾರ್ಯ ಮಾಡಲಾಗುವುದು ಎಂದರು.
ವಿದ್ಯುತ್ ಅವಘಢದಲ್ಲಿ ಅಸುನೀಗಿದ ಶುಭಂ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಣೆ ಮಾಡಲಾಯಿತು‌.

ಇನ್ನೂ ಮೃತ ಯುವಕ ಮನೆಗೆ ಒಬ್ಬನೇ ಮಗನಾಗಿದ್ದಾನೆ.ಒಬ್ಬ ಸಹೋದರಿ ಇದ್ದು ಯುವಕನ ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಹಿಂದೂಪರ ಸಂಘಟನೆಗಳ ಪ್ರಮುಖರು ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.‌ಈ ಸಂದರ್ಭದಲ್ಲಿ ಅಗತ್ಯ ಎಚ್ಚರಿಕೆ ವಹಿಸದ ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನೂರಾರು ಹಿಂದೂ ಪ್ರಮುಖರು ಹೆಸ್ಕಾಂ ವತಿಯಿಂದ ಮೃತ ಯುವಕನ ಸಹೋದರಿಗೆ ಸರ್ಕಾರಿ ಕೆಲಸ ಕೊಡಬೇಕು ಜೊತೆಗೆ ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು. ಇನ್ನೂ ಸೋಶಿಯಲ್ ಮಿಡಿಯಾದಲ್ಲಿಯೂ ಕೂಡ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ‌50 ಲಕ್ಷ ಪರಿಹಾರದ ಜೊತೆಗೆ ನೌಕರಿ ಕೊಡಿಸಲು ಒತ್ತಾಯ ಜೋರಾಗಿದೆ.

ಒಟ್ನಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆದ ಈ ಘಟನೆ ಎಚ್ಚರಿಕೆಯ ಪಾಠವಾಗಿದೆ. ಯುವಕರು ಹಬ್ಬಗಳಲ್ಲಿ, ಸಂಭ್ರಮಗಳಲ್ಲಿ ಮೈ ಮರೆಯದೇ ಎಚ್ಚರಿಕೆ ವಹಿಸಿದರೇ ಇಂತಹ ಘಟನೆ ಮರುಕಳಿಸಲಾರವು. ಯುವಕರು ಇನ್ನಾದ್ರೂ ಎಚ್ಚರಿಕೆ ವಹಿಸಲಿ ಎನ್ನುವದೇ ನಮ್ಮ ಆಶಯ.

Tags:

error: Content is protected !!