ಒಳಮೀಸಲಾತಿ ಹೆಸರಿನಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯ ಗಳ ಜೊತೆಗೆ ಇನ್ನೂ 63 ಜಾತಿಗಳನ್ನು ಸೇರಿಸಿ, ಶೇ.5 ಮೀಸಲಾತಿ ನೀಡಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಶನಿವಾರ ವಿಜಯಪುರ ನಗರದಲ್ಲಿ ಲಂಬಾಣಿ, ಬೋವಿ, ಕೊರಚ, ಕೊರಮ, ಸಮುದಾಯ ಗಳು ಬೃಹತ್ ಪ್ರತಿಭಟನೆ ನಡೆಸಿದವು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಯಲ್ಲಿ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು. ಮೆರವಣಿಗೆ ಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇವರ ಭಾವಚಿತ್ರಗಳನ್ನು ಹಿಡಿದು ಘೋಷಣೆ ಹಾಕಿದರು. ಪ್ರತಿಭಟನೆಯಲ್ಲಿ ಹಂದಿಗಳನ್ನು ಹಿಡಿಯುವ ಬಲೆಯಲ್ಲಿ ಡಿಸಿಎಂ ಹಾಗೂ ಸಿಎಂ ಭಾವಚಿತ್ರಗಳನ್ನು ಹಾಕಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಹಂದಿಮರಿಗಳನ್ನು ಹಾಗೂ ತಲೆಯ ಮೇಲೆ ಚಪ್ಪಲಿಗಳನ್ನು ಹೊತ್ತು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಡಾ. ನಾಗಮೋಹನ್ ದಾಸ್ ವರದಿಯನ್ನು ಮರುಪರಿಶೀಲಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಖಂಡರು ಮಾತನಾಡಿ, ”ರಾಜ್ಯ ಸರಕಾರ ಮೀಸಲಾತಿ ಹಂಚಿಕೆಯಲ್ಲಿ ನಮಗೆ ಅನ್ಯಾಯ ಮಾಡಿದೆ. ಲಂಬಾಣಿ, ಕೊರಮ, ಕೊರಚ ಹಾಗೂ ಭೋವಿ ಸಮುದಾಯಗಳ ಜನಸಂಖ್ಯೆ ಇತರೆ ಸಮುದಾಯಗಳ ಜನಸಂಖ್ಯೆಗಿಂತ ಹೆಚ್ಚಾಗಿದೆ. ಅಲ್ಲದೆ, ಡಾ. ನಾಗಮೋಹನ್ ದಾಸ್ ವರದಿ ದೋಷಪೂರಿತ ದತ್ತಾಂಶಗಳಿಂದ ಕೂಡಿದೆ. ಹೀಗಾಗಿ ನಾವು ಈ ಮೀಸಲಾತಿ ಹಂಚಿಕೆ ಒಪ್ಪುವುದಿಲ್ಲ. ಕಾರಣ ಸರಕಾರ ವರದಿಯನ್ನು ಮರುಪರಿಶೀಲಿಸಬೇಕು”, ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
