ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡದಿಂದಾಗಿ ಹುಲುಸಾಗಿ ಬೆಳೆದಿದ್ದ 13 ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ನಡೆದಿದೆ.
ಹೊಸಟ್ಟಿ ಗ್ರಾಮದ ನಾಯಕ ತೋಟದ ಸುಮಾರು 6 ಕ್ಕೂ ಹೆಚ್ಚು ರೈತರಿಗೆ ಸೇರಿದ 13 ಎಕರೆ ಕಬ್ಬು ಸುಟ್ಟಿದೆ.
ಕಳೆದ ಆರು ದಶಕಗಳ ಹಿಂದೆ ಅಳವಡಿಸಲಾದ ವಿದ್ಯುತ್ ಕಂಬ ಹಾಗೂ ಹಳೆಯ ವಿದ್ಯುತ್ ತಂತಿಗಳ ಸ್ಪರ್ಶದಿಂದ ಈ ಅವಘಡ ಸಂಭವಿಸಿದ್ದು ಎಂದು ಹೆಸ್ಕಾಂ ಇಲಾಖೆ ವಿರುದ್ಧ ರೈತರು ಕಿಡಿಕಾರಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ತೀವ್ರವಾಗಿ ಆವರಿಸಿಕೊಂಡ ಬೆಂಕಿ ಹತೋಟಿಗೆ ಬಾರದೇ ಸುಮಾರು 13 ಎಕರೆ ಭೂಪ್ರದೇಶದಲ್ಲಿದ್ದ ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇನ್ನೇನು ಕಟ್ಟಾವಿನ ಹಂತಕ್ಕೆ ಬಂದಿರುವ ಕಬ್ಬು ವಿದ್ಯುತ್ ಅವಗಡಕ್ಕೆ ತುತ್ತಾಗಿದ್ದು ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ.