ಶಾಸಕ ಯತ್ನಾಳರಿಂದ ಆಪ್ತರು ದೂರ ದೂರ?;ನೀನೊಂದು ತೀರಾ, ನಾನೋಂದು ತೀರಾ ಎನ್ನುತ್ತಿದ್ದಾರೆ ಆಪ್ತರು…!
ಅವರು ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು. ಒಂದು ಸಮುದಾಯವನ್ನು ತಮ್ಮ ಜಿಲ್ಲೆಯಲ್ಲಿ ಸಂಘಟಿಸಿ ಮುಂಚೂಣಿಗೆ ಬಂದವರು. ರಾಜಕೀಯ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿ, ಸಾಕಷ್ಟು ಸಂಘ ಸಂಸ್ಥೆಗಳಿಗೆ ಸಹಾಯ ಮಾಡಿದವರು. ಅವರು ಹಾಲಿ ಶಾಸಕರ ಕಟ್ಟಾ ಬೆಂಬಲಿಗ, ಹಿತೈಷಿಯಾಗಿ ಕಷ್ಟ ಕಾಲದಲ್ಲಿಯೂ ಜೊತೆಗೆ ಇದ್ದವರು. ಆದ್ರೆ ಇದೀಗ ಅವರು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರುವ ಗುಸುಗುಸು ಪ್ರಾರಂಭವಾಗಿದೆ. ಇನ್ನೂ ಕಾಂಗ್ರೆಸ್ ಕೂಡಾ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ. ಅಂದ ಹಾಗೆ ಆ ಮುಖಂಡ ಯಾರು? ಎನ್ನುವ ಕುರಿತು ಇಲ್ಲಿದೆ ಡಿಟೇಲ್ಸ್…
ವಿಜಯಪುರ ನಗರ ಕ್ಷೇತ್ರ ರಾಜಕಾರಣದಲ್ಲಿ ಪರಶುರಾಮ ರಜಪೂತ ಇವರ ಹೆಸರು ಕೇಳದವರೇ ಇಲ್ಲಾ. ಬಿಜೆಪಿ ಪಕ್ಷದ ಕಟ್ಟಾಳಾಗಿ ದುಡಿದು ಪಕ್ಷ ಕಟ್ಟುವಲ್ಲಿ ಶ್ರಮಿಸಿದವ್ದವರು. ಶಾಸಕ ಯತ್ನಾಳರ ಕಟ್ಟಾ ಬೆಂಬಲಿಗರಾಗಿ ಯತ್ನಾಳರಿಗೆ ಅಧಿಕಾರ ಇಲ್ಲದಿದ್ಸಾಗ ಕೂಡಾ ಯತ್ನಾಳರಿಗೆ ಬೆಂಬಲವಾಗಿ ನಿಂತು ಯತ್ನಾಳ ಮರಳಿ ಅಧಿಕಾರಕ್ಕೆ ಬರುವವರೆಗೆ ಸಾಥ್ ನೀಡಿದ್ದವರು. ಇದೀಗ ಶಾಸಕ ಯತ್ನಾಳ ಮೇಲೆ ಬೇಸರಿಸಿಕೊಂಡಿದ್ದಾರೆ ಎನ್ನೋ ಮಾತುಗಳು ಗೋಳಗುಮ್ಮಟಂತೆ ಪ್ರತಿಧ್ವನಿಸುತ್ತಿವೆ. ವಿಜಯಪುರ ನಗರಸಭೆ ಹಾಗೂ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಕಮಲ ತೊರೆದು ‘ಕೈ’ ಹಿಡಿಯಲಿದ್ದಾರೆಯೇ ? ಎಂಬ ಗುಸುಗುಸು ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದು ಕುತೂಹಲ ಮೂಡಿಸಿದೆ. ಬಿಜೆಪಿಯಿಂದ ಉಚ್ಚಾಟಿತರಾಗಿರುವ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಕಟ್ಟಾ ಬೆಂಬಲಿಗರು ಹಾಗೂ ರಜಪೂತ ಸಮಾಜದ ಮುಖಂಡರಾಗಿರುವ ಪರಶುರಾಮಸಿಂಗ್ ಕಳೆದ ಎಂಟು ಒಂಭತ್ತು ತಿಂಗಳಿಂದ ಶಾಸಕ ಯತ್ನಾಳ ಅವರೊಂದಿಗೆ ಅಂತರ ಕಾಯ್ದುಕೊಂಡಿರುವುದೇ ಈ ಚರ್ಚೆಗೆ ಕಾರಣವಾಗಿದೆ.
ಇನ್ನೂ ಪರಶುರಾಮ ರಜಪೂತ ಮೊದಲಿನಿಂದಲೂ ಕಾಂಗ್ರೆಸ್ ನಾಯಕರೊಂದಿಗೆ ‘ದೋಸ್ತಿ’ ಹೊಂದಿದ್ದಾರೆ. ಈಗ ಕೈ ಪಾಳಯಕ್ಕೆ ಜಿಗಿಯುವ ದಿಸೆಯಲ್ಲಿ ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ರಾಜಪೂತ ಸಮಾಜದ ಪ್ರಭಾವಿ ನಾಯಕರಾಗಿರುವ ಪರಶುರಾಮ ಸಿಂಗ್ ರಜಪೂತ ಅವರನ್ನು ತಮ್ಮ ಪಕ್ಷದತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ನಾಯಕರು ಸಹ ಉತ್ಸುಕರಾಗಿದ್ದಾರೆಂದು ಗೊತ್ತಾಗಿದೆ ಎನ್ನಲಾಗುತ್ತಿದೆ. ಇನ್ನೂ ಕಾರ್ಮಿಕರಾಗಿ ಬಡತನದಿಂದಲೇ ಬೆಳೆದು ನಗರಸಭೆ ಸದಸ್ಯರಾಗಿ, ನಂತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರಜಪೂತ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ವಿಧಾನ ಪರಿಷತ್ ಸದಸ್ಯ ಸ್ಥಾನ ಕ್ಕೂ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ನಂತರ ಮೊನ್ನೆ ನಡೆದ ಪಾಲಿಕೆ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ರಾಜಕೀಯ ವಲಯದಲ್ಲಿ ತಮ್ಮ ಛಾಪು ಇರಿಸಿದ್ದು, ರಾಜಪೂತ ಸಮಾಜ ಸಂಘಟನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಯತ್ನಾಳ ಅವರು ರಜಪೂತ ಅವರನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದರು. ಈಗ ಅವರ ಜೊತೆ ಬಹಳ ದಿನಗಳಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಜನಪ್ರತಿನಿಧಿಗಳ ಜೊತೆ ವೇದಿಕೆ ಹಂಚಿಕೊಂಡಿರುವ ಫೋಟೋಗಳು ಹರಿದಾಡುತ್ತಿರುವುದರಿಂದ ಕಾಂಗ್ರೆಸ್ ಸೇರುವುದು ಖಾತ್ರಿಯೆನ್ನಲಾಗುತ್ತಿದೆ. ಇನ್ನೂ ಮೂರು ಜನ ನಾಯಕರು ಕೂಡಾ ರಜಪೂತ ಹಾದಿಯಲ್ಲೇ ಸಾಗಲಿದ್ದಾರೆ ಎಂಬ ಮಾತುಗಳು ಸದ್ದು ಮಾಡುತ್ತಿವೆ.
ಒಟ್ನಲ್ಲಿ ಯತ್ನಾಳ ಆಪ್ತರಾಗಿದ್ದ ಪರಶುರಾಮ ರಜಪೂತ ದೂರವಾಗುತ್ತಿದ್ದಾರೆ. ಜೊತೆಗೆ ಇನ್ನೂ ಪ್ರಮುಖ ಮೂರು ನಾಯಕರು ರಜಪೂತ ಹಾದಿಯಲ್ಲೇ ಸಾಗಲಿದ್ದಾರೆ ಆದರೆ ಆ ಮೂರು ಮುಖಂಡರು ಯಾರು ಎನ್ನೋ ಸ್ಪಷ್ಟತೆ ದೊರೆತಿಲ್ಲಾ. ರಾಜಸ್ತಾನ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದ ರಾಜಕಾರಣಿಗಳೊಂದಿಗೆ ಒಡನಾಟ ಹೊಂದಿರುವ ಪರಶುರಾಮ ರಜಪೂತ ಅವರು ಕಮಲ ತೊರೆದು ‘ಕೈ’ ಹಿಡಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

