ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಭವಾನಿ ಶಿಕ್ಷಣ ಸಂಸ್ಥೆಯು ಅನುದಾನಿತ ಶಿಕ್ಷಣ ಸಂಸ್ಥೆಯಾಗಿದ್ದು, ಇಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು, ಕಟ್ಟಡ ನಿಧಿ ಹೆಸರಿನಲ್ಲಿ ಮಕ್ಕಳ ಪಾಲಕರಿಂದ ಹಣ ಸುಲಿಗೆ ಮಾಡುತ್ತಿರುವ ಈ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ವಿರುದ್ಧ ಜಿಲ್ಲಾಡಳಿತ ಶಿಸ್ತು ಕ್ರಮ ಜರುಗಿಸಬೇಕು ಎಂದು ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಅಗ್ರಹಿಸಿದರು.
ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು. ರಾಯಬಾಗ ಕರವೇ ತಾಲೂಧ್ಯಕ್ಷ ಇರ್ಫಾನ್ ತಾಂಬೋಳಿ ಮಾತನಾಡಿ ಕೋಳಿಗುಡ್ಡ ಗ್ರಾಮದ ಭವಾನಿ ಶಿಕ್ಷಣ ಸಂಸ್ಥೆಯವರು ಅನೇಕ ವರ್ಷಗಳಿಂದ ಮಕ್ಕಳ ಪಾಲಕರಿಂದ ಶಿಕ್ಷಣ ಇಲಾಖೆಯ ನಿಯಮಗಳನ್ನು ಮೀರಿ ಡೊನೇಷನ್ ತೆಗೆದುಕೊಳ್ಳುತ್ತಿದ್ದಾರೆ. ಸಂಸ್ಥೆಯಲ್ಲಿ ಮಕ್ಕಳ ಕಲಿಕೆಗೆ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ ತೋರುತ್ತಿದ್ದು, ಕೊಠಡಿಗಳ ಕೊರತೆ ಇರುವ ಈ ಶಾಲೆಯ ಕೊಠಡಿ ಒಂದನ್ನು ಬುಕ್ ಸ್ಟಾಲ್ ಮತ್ತು ಜನರಲ್ ಸ್ಟೋರ್ ನಡೆಸುವ ಮೂಲಕ ವ್ಯಾಪಾರಿ ಮಳಿಗೆಯನ್ನಾಗಿ ಮಾಡಿಕೊಂಡಿದ್ದಾರೆ. ಡೊನೇಷನ್ ಹಾವಳಿಯಿಂದ ಬಡ ಮಕ್ಕಳು, ದೀನ ದಲಿತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲಾ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ನೀಡದೆ ಡೊನೇಶನ್ ನೀಡುವ ಬೇರೆ ಗ್ರಾಮಗಳ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳಾದ ತಾವು ಇಂತಹ ಶಾಲೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒತ್ತಾಯಿಸಿದರು.
ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ … ಅವರಿಗೆ ಮನವಿ ಸಲ್ಲಿಸಿದ ನಂತರ ಕೋಳಿಗುಡ್ಡ ಗ್ರಾಮ ಶಾಖೆಯ ಅಧ್ಯಕ್ಷ ಸಿಕಂದರ ನದಾಫ್
ಮಾತನಾಡಿ ಕಟ್ಟಡ ನಿಧಿ ಅಥವಾ ದೇಣಿಗೆಯನ್ನು ಯಾರಿಗೂ ಒತ್ತಾಯ ಪೂರ್ವಕವಾಗಿ ವಸೂಲಿ ಮಾಡಬಾರದು ಎಂಬ ನಿಯಮ ಇದ್ದರೂ ಕೂಡ ಕಟ್ಟಡ ನಿಧಿ ಹೆಸರಿನಲ್ಲಿ ಡೊನೇಷನ್ ವಸೂಲಿ ಮಾಡುತ್ತಿದ್ದಾರೆ. 1 ರಿಂದ 5 ನೇ ತರಗತಿಯಲ್ಲಿ 3500 ಮತ್ತು 5 ರಿಂದ 8ನೇ ತರಗತಿವರೆಗೂ 4500 ಮತ್ತು 9 .10 ನೇ ತರಗತಿಯ ಮಕ್ಕಳಿಗೆ 5,000 ಡೊನೇಷನ್ ವಸೂಲಿ ಮಾಡುತ್ತಿದ್ದಾರೆ. ತುಂಬದೇ ಇರುವ ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕುತ್ತಿದ್ದು, ಇದನ್ನ ಪ್ರಶ್ನಿಸಿದರೆ ಮಕ್ಕಳ ಪಾಲಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ಶಿಕ್ಷಣಾಧಿಕಾರಿಗಳು ಸರಿಪಡಿಸಬೇಕು. ಇಲ್ಲವಾದರೆ ಮುಂಬರುವ ಜತ್ತ – ಜಂಬೋಟ ರಾಜ್ಯ ಹೆದ್ದಾರಿಯನ್ನು ತಡೆದು ಕೋಳಿಗುಡ್ಡ ಗ್ರಾಮದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

